ಶ್ರೀನಗರ, ಫೆ 02 (DaijiworldNews/DB): ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ನಲ್ಲಿ ಸ್ಪೋಟ ಸೇರಿದಂತೆ ಹಲವು ಸ್ಪೋಟಗಳಲ್ಲಿ ಭಾಗಿಯಾಗಿದ್ದಲ್ಲದೆ ಲಷ್ಕರ್-ಎ-ತೊಯ್ಬಾ-ಭಯೋತ್ಪಾದಕನಾಗಿ ಬದಲಾಗಿರುವ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ರಿಯಾಸಿ ಜಿಲ್ಲೆಯ ನಿವಾಸಿ ಆರಿಫ್ ಬಂಧಿತ ಆರೋಪಿ. ಜಮ್ಮುವಿನ ನರ್ವಾಲ್ನಲ್ಲಿ ಇತ್ತೀಚೆಗೆ ನಡೆದ ಅವಳಿ ಸ್ಪೋಟ ಪ್ರಕರಣದ ತನಿಖೆ ಬಳಿಕ ಈತನನ್ನು ಬಂಧಿಸಲಾಗಿದೆ. ಬಂಧಿತನಿಂದ ಪರ್ಫ್ಯೂಮ್ ಬಾಟಲಿಯೊಳಗೆ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಳ್ಳಲಾಗಿದೆ. ಇಂತಹ ಬಾಂಬ್ನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಗುರುವಾರ ತಿಳಿಸಿದ್ದಾರೆ.
ವೈಷ್ಣೋದೇವಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ನಲ್ಲಿ ಕಳೆದ ಮೇನಲ್ಲಿ ಸ್ಪೋಟ ಸಂಭವಿಸಿ ನಾಲ್ವರ ಸಾವಿಗೆ ಕಾರಣವಾಗಿತ್ತು. ಈ ಸ್ಪೋಟದಲ್ಲಿ ಆರೀಫ್ ಭಾಗಿಯಾಗಿರುವುದನ್ನು ಸ್ವತಃ ಆತನೇ ಒಪ್ಪಿಕೊಂಡಿದ್ದಾನೆ. ಇನ್ನೂ ಹಲವು ಸ್ಪೋಟಗಳಲ್ಲಿ ಆತ ಭಾಗಿಯಾಗಿರುವ ಶಂಕೆಯಿದೆ. ಸರ್ಕಾರಿ ಶಾಲೆಯ ಶಿಕ್ಷಕನಾಗಿ ಆತ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.