ಕಣ್ಣೂರು, ಫೆ 02 (DaijiworldNews/DB): ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಗರ್ಭಿಣಿ ಮತ್ತು ಅವರ ಪತಿ ಸಜೀವದಹನವಾದ ಘಟನೆ ಕಣ್ಣೂರಿನ ಜಿಲ್ಲಾಸ್ಪತ್ರೆ ಸಮೀಪ ಗುರುವಾರ ನಡೆದಿದೆ.
35 ವರ್ಷದ ವ್ಯಕ್ತಿ ಮತ್ತು ಅವರ ಪತ್ನಿ, ಗರ್ಭಿಣಿಯಾಗಿದ್ದ 26 ವರ್ಷದ ಮಹಿಳೆ ಮೃತಪಟ್ಟವರು. ಗರ್ಭಿಣಿಯು ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ ಘಟನೆ ಸಂಭವಿಸಿದೆ. ಕಾರಿನಲ್ಲಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಹಿಂಬದಿ ಸೀಟ್ನಲ್ಲಿದ್ದ ಮಗು ಸಹಿತ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಣ್ಣೂರು ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್ ತಿಳಿಸಿದ್ದಾರೆ.
ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮುಂಭಾಗದ ಬಾಗಿಲನ್ನು ತೆರೆಯಲು ದಂಪತಿಗೆ ಸಾಧ್ಯವಾಗಿಲ್ಲ.ಬೆಂಕಿ ಹೊತ್ತಿಕೊಳ್ಳುವುದನ್ನು ನೋಡಿದ ಸ್ಥಳೀಯರು ಕೂಡಲೇ ಓಡಿಬಂದು ಕಾರಿನಲ್ಲಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇಂಧನ ತೈಲ ಟ್ಯಾಂಕ್ ಸ್ಪೋಟದ ಆತಂಕದಿಂದಾಗಿ ಅವರಿಗೆ ಮುಂದಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಇದರಿಂದ ದಂಪತಿಯನ್ನು ಬದುಕಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.