ನವದೆಹಲಿ, ಫೆ 02 (DaijiworldNews/DB): ಚುನಾವಣೆಗಳಲ್ಲಿ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಸ್ಪರ್ಧೆ ನಡೆಸುವುದು ಶಾಸಕಾಂಗ ನೀತಿಯ ವಿಷಯವಾಗಿದೆ. ವಿವಿಧ ಕಾರಣಗಳಿಂದ ಆತ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು. ಈ ಆಯ್ಕೆ ಸಂಸತ್ತಿಗೆ ಬಿಟ್ಟ ವಿಷಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
1951ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 33(7) ಘೋಷಿಸುವಂತೆ ಕೋರಿ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲಾ ಪೀಠ ವಿಚಾರಣೆ ನಡೆಸಿತು. ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಅಭ್ಯರ್ಥಿ ಎರಡೂ ಕ್ಷೇತ್ರಗಳಲ್ಲಿ ಜಯ ಗಳಿಸಿದರೆ ಒಂದು ಕ್ಷೇತ್ರವನ್ನು ತೆರವು ಮಾಡಬೇಕಾಗುತ್ತದೆ. ಹೀಗಾಗಿ ಅಲ್ಲಿ ಉಪ ಚುನಾವಣೆ ಅನಿವಾರ್ಯವಾಗುತ್ತದೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆ ಬೊಕ್ಕಸಕ್ಕೆ ಬೀಳುತ್ತದೆ ಎಂದು ಅರ್ಜಿದಾರರ ಪರ ವಕೀಲ ಗೋಪಾಲ್ ಶಂಕರ ನಾರಾಯಣನ್ ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅಭ್ಯರ್ಥಿಯ ಸ್ಪರ್ಧಿಸುವ ಕ್ಷೇತ್ರ ಸಂಖ್ಯೆಯನ್ನು ನಿರ್ಧರಿಸುವ ವಿಚಾರ ಸಂಸತ್ತಿಗೆ ಬಿಟ್ಟದ್ದಾಗಿದೆ. ಇದು ಚುನಾವಣಾ ಪ್ರಜಾಪ್ರಭುತ್ವದ ಭಾಗವಾಗಿದೆ ಎಂದು ಅಭಿಪ್ರಾಯಿಸಿತು.