ಬೆಂಗಳೂರು, ಫೆ 03 (DaijiworldNews/HR): ಇಂದಿನಿಂದ ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸುತ್ತಿದ್ದು, ಇದು ಯಾವುದೇ ರೀತಿಯಲ್ಲಿಯೂ ಪ್ರತ್ಯೇಕ ಯಾತ್ರೆಯಲ್ಲ. ಜಿಲ್ಲಾ ಹಂತದಲ್ಲಿ ನಾವು ಈಗಾಗಲೇ ಯಾತ್ರೆ ಮುಗಿಸಿದ್ದು, ಇದೀಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾತ್ರೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಯಾತ್ರೆ ಆರಂಭಿಸಲಾಗುತ್ತಿದ್ದು, ಇಂದು 10ಗಂಟೆಯ ಸುಮಾರಿಗೆ ಕ್ಷೇತ್ರದಲ್ಲಿನ ಕುರುಡುನಲೆ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆ ಆರಂಭಿಸಲಾಗುವುದು ಎಂದರು.
ಇನ್ನು ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು, ಪ್ರತಿ ಜಿಲ್ಲೆಯ ಆಕಾಂಕ್ಷಿಗಳ ಜತೆ ಚರ್ಚೆ ಮಾಡಿ ಕೆಲವು ಹೆಸರುಗಳನ್ನು ಶಿಫಾರಸ್ಸು ಮಾಡಲು ಕಾರ್ಯದರ್ಶಿಗಳು, ಕಾರ್ಯಾಧ್ಯಕ್ಷರು, ಚುನಾವಣಾ ಸಮಿತಿ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿತ್ತು. ಅವರ ಶಿಫಾರಸ್ಸುಗಳನ್ನು ನಮಗೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.