ಹುಬ್ಬಳ್ಳಿ, ಫೆ 03 (DaijiworldNews/DB): ಮೂರು ಮಕ್ಕಳ ತಂದೆಯೊಬ್ಬ ಪತ್ನಿ ಬದುಕಿರುವಾಗಲೇ ಅಪ್ರಾಪ್ತ ಬಾಲಕಿಯನ್ನು ವರಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇದೀಗ ತಾನು ಬದುಕಿರುವಾಗಲೇ ಇನ್ನೊಂದು ಮದುವೆಯಾದ ಪತಿ ವಿರುದ್ದ ಮೊದಲ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹುಬ್ಬಳ್ಳಿಯ ಮಹದೇವ ನಗರ ನಿವಾಸಿ ಹನಮಂತ ಉಪ್ಪಾರ ಎಂಬಾತನೇ ಅಪ್ರಾಪ್ತಳನ್ನು ವರಿಸಿದ ಭೂಪ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ಈತ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದ. ಮೊದಲ ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸಿ ಈತ ಎರಡನೇ ಮದುವೆಯಾಗಿದ್ದ.
ಈತನ ವಿರುದ್ದ ಸದ್ಯ ಎರಡು ಪ್ರಕರಣ ದಾಖಲಾಗಿದೆ. ಹಣದಾಸೆ ತೋರಿಸಿ 17 ವರ್ಷದ ಅಪ್ರಾಪ್ತಳನ್ನು ವರಿಸಿದ ಈತನ ವಿರುದ್ದ ಶಿಶು ಅಭಿವೃದ್ಧಿ ಅಧಿಕಾರಿಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ತಾನು ಬದುಕಿರುವಾಗಲೇ ಇನ್ನೊಂದು ಮದುವೆಯಾಗಿದ್ದಕ್ಕಾಗಿ ಈತನ ಮೊದಲ ಪತ್ನಿ ನೇತ್ರಾ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿದ್ದಾಳೆ. ಇತ್ತ ದೂರು ದಾಖಲಿಸುತ್ತಿದ್ದಂತೆ ಮೂರು ಮಕ್ಕಳ ತಂದೆ ಪರಾರಿಯಾಗಿದ್ದಾನೆ.
ಹನುಮಂತ ಮತ್ತು ನೇತ್ರಾ ಕಳೆದ 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಮೂರು ಮಕ್ಕಳಿದ್ದಾರೆ. ಆದರೆ ಇತ್ತೀಚೆಗೆ ನೇತ್ರಾ ಮೇಲೆ ಅನುಮಾನ ಪಡುತ್ತಿದ್ದ ಹನುಮಂತ ಇದೇ ಕಾರಣಕ್ಕಾಗಿ ಆಗಾಗ ಪತ್ನಿ ಜೊತೆ ಖ್ಯಾತೆ ತೆಗೆಯುತ್ತಿದ್ದ. ಅಲ್ಲದೆ ಪತಿ-ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಕ್ಕಳನ್ನು ಹನುಮಂತ ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಸಣ್ಣಪುಟ್ಟ ಬಡ್ಡಿ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಈತ ಸಾಕಷ್ಟು ಹಣ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಹಣದ ಆಸೆ ತೋರಿಸಿ ಬಾಲಕಿಯನ್ನು ಮದುವೆಯಾಗಿದ್ದ.