ನವದೆಹಲಿ, ಫೆ 03 (DaijiworldNews/DB): ಭಾರತದ ಅತಿ ದೊಡ್ಡ ಹಾಲು ಮಾರಾಟ ಸಂಸ್ಥೆ ಅಮುಲ್ ಹಾಲಿನ ದರ ಮತ್ತಷ್ಟು ತುಟ್ಟಿಯಾಗಿದೆ. ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಪ್ರತಿ ಲೀಟರ್ ಅಮುಲ್ ಹಾಲಿಗೆ 3 ರೂ.ಗಳಷ್ಟು ದರ ಹೆಚ್ಚಳ ಮಾಡಿದೆ.
ಇತ್ತೀಚೆಗಷ್ಟೇ ಅಮುಲ್ ದರ ಪರಿಷ್ಕರಣೆ ಮಾಡಲಾಗಿದ್ದು, ಪ್ರತೀ ಲೀಟರ್ ಪ್ಯಾಕೆಟ್ಗೆ 66 ರೂ.(ಗೋಲ್ಡ್), ಅಮುಲ್ ತಾಜಾ 1 ಲೀಟರ್ ಹಾಲಿನ ಬೆಲೆ 54 ರೂ., ಹಸುವಿನ ಹಾಲಿನ 1 ಲೀಟರ್ ಬೆಲೆ 56 ರೂ. ಮತ್ತು ಅಮುಲ್ ಎ2 ಎಮ್ಮೆ ಹಾಲಿನ ಬೆಲೆ ಲೀಟರ್ಗೆ 70 ರೂ.ಗಳಷ್ಟಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಬೆಲೆ ಏರಿಕೆಯು ಇಂದಿನಿಂದಲೇ ಜಾರಿಯಾಗಲಿದೆ. ಕಳೆದ ವರ್ಷ ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್ನಲ್ಲಿ ಸೇರಿ ಒಟ್ಟು 3 ಬಾರಿ ದರ ಏರಿಕೆ ಮಾಡಲಾಗಿತ್ತು. ಈ ವರ್ಷ ಇದು ಮೊದಲ ಬೆಲೆ ಏರಿಕೆಯಾಗಿದೆ.
ಹಾಲಿನ ಉತ್ಪಾದನೆ, ನಿರ್ವಹಣಾ ವೆಚ್ಚ ಅಧಿಕಗೊಂಡಿದೆ. ಅಲ್ಲದೆ ದನಗಳ ಮೇವಿನದ ದರಲ್ಲಿಯೂ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 20ರಷ್ಟು ಜಾಸ್ತಿಯಾಗಿದೆ. ಹೀಗಾಗಿ ಗ್ರಾಹಕರಿಗೆ ನೀಡುವ ಹಾಲಿನ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.