ಬೆಳಗಾವಿ, ಫೆ 03 (DaijiworldNews/DB): ಡಿ.ಕೆ. ಶಿವಕುಮಾರ್ ಬಳಿ ಇರುವ ಸಿಡಿಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಅಮಿತ್ ಶಾ ಅವರ ದೆಹಲಿಯ ನಿವಾಸದಲ್ಲಿ ಗುರುವಾರ ರಾತ್ರಿ ಸುದೀರ್ಘ ಸಮಾಲೋಚನೆ ನಡೆಸಿದ ರಮೇಶ ಜಾರಕಿಹೊಳಿ, ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಸುಮಾರು 100ಕ್ಕೂ ಅಧಿಕ ಸಿಡಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಳಿ ಇವೆ. ನನ್ನ ಬಳಿ ಈ ಸಂಬಂಧ ದಾಖಲೆಯೂ ಇದ್ದು, ಈ ವಿಚಾರವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇನ್ನು ಜಾರಕಿಹೊಳಿ ಪ್ರಸ್ತಾಪಿಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, ಮುಂದಿನ ಎರಡ್ಮೂರು ದಿನಗಳಲ್ಲಿ ಈ ಸಂಬಂಧ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರ ಸಚಿವರ ಭೇಟಿ ವೇಳೆ ಜಾರಕಿಹೊಳಿ ಅವರೊಂದಿಗೆ ಕೇಂದ್ರ ಸಚಿವರೊಬ್ಬರು ಇದ್ದರು. ಇನ್ನು ಇತರ ಕೆಲವು ಹಿರಿಯ ವರಿಷ್ಠರೊಂದಿಗೂ ಜಾರಕಿಹೊಳಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.