ಭೋಪಾಲ್, ಫೆ 03 (DaijiworldNews/HR): ಮಧ್ಯಪ್ರದೇಶದ ಓರ್ಚಾ ಪಟ್ಟಣದ ಮದ್ಯದಂಗಡಿಯೊಂದರ ಮುಂದೆ ಬಿಡಾಡಿ ಹಸುಗಳನ್ನು ಕಟ್ಟಿಹಾಕಿ, ಅವುಗಳಿಗೆ ಹುಲ್ಲು ತಿನ್ನಿಸಿ ಜನರು ಮದ್ಯ ತ್ಯಜಿಸಿ ಹಸುವಿನ ಹಾಲು ಕುಡಿಯಬೇಕು ಎಂದು ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಕರೆ ನೀಡಿದ್ದಾರೆ.
ಮಧ್ಯಪ್ರದೇಶ ರಾಜ್ಯದಲ್ಲಿ ಮದ್ಯ ಸೇವನೆಯ ವಿರುದ್ಧದ ಅಭಿಯಾನದ ನೇತೃತ್ವ ವಹಿಸಿರುವ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಸರ್ಕಾರವು ಜನರ ಮದ್ಯಪಾನದ ಅಭ್ಯಾಸವನ್ನು ಉಪಯೋಗ ಮಾಡಿಕೊಳ್ಳಬಾರದು ಎಂದರು.
ಇನ್ನು ಐಎಂಎಫ್ಎಲ್ ಮಾರಾಟ ಮಾಡುವ ಅಂಗಡಿಯ ಮುಂದೆ ಹಸುಗಳನ್ನು ಕಟ್ಟಿ ಹಾಕಿದ ಅವರು, ‘ಶರಾಬ್ ನಹಿ, ದೂದ್ ಪಿಯೋ (ಮದ್ಯವಲ್ಲ, ಹಾಲು ಕುಡಿಯಿರಿ) ಎಂಬ ಘೋಷಣೆಯನ್ನು ಕೂಗಿದ್ದಾರೆ.
ಕಳೆದ ವರ್ಷ ಜೂನ್ ನಲ್ಲಿ ಇದೇ ಮದ್ಯದಂಗಡಿಗೆ ಉಮಾ ಭಾರತಿ ಅವರು ಹಸುವಿನ ಸಗಣಿ ಎಸೆದಿದ್ದರು.