ಮುಂಬೈ, ಫೆ 03 (DaijiworldNews/DB): ತಾಲಿಬಾನ್ ಸದಸ್ಯ ಎಂಬುದಾಗಿ ಹೇಳಿಕೊಂಡ ಅಪರಿಚಿತನೋರ್ವ ಮುಂಬೈಯಲ್ಲಿ ಭಯೋತ್ಪಾದಲಕ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಇಮೇಲ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿದೆ.
ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ ಜಂಟಿಯಾಗಿ ಇಮೇಲ್ ಕುರಿತು ತನಿಖೆ ಪ್ರಾರಂಭಿಸಿವೆ. ಮಹಾರಾಷ್ಟ್ರ ಸೇರಿದಂತ ವಿವಿಧ ನಗರಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಮುಂಬೈಯಲ್ಲಿ ಭಯೋತ್ಪಾದಕ ದಾಳಿ ನಡೆಸಲಾಗುವುದು ಎಂದು ಅಪರಿಚಿತನು ಎನ್ಐಎಗೆ ಇಮೇಲ್ ಮಾಡಿದ್ದಾನೆ. ಈತ ತನ್ನನ್ನು ತಾಲಿಬಾನಿ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾಲಿಬಾನ್ನ ಪ್ರಮುಖ ನಾಯಕ ಸಿರಾಜುದ್ದೀನ್ ಹಕ್ಕಾನಿಯ ಆದೇಶದ ಮೇರೆಗೆ ಈ ದಾಳಿ ನಡೆಯುತ್ತಿದೆ ಎಂದೂ ಇಮೇಲ್ನಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.