ಪುದುಚೇರಿ, ಫೆ 03 (DaijiworldNews/DB): ಪುದುಚೇರಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷ ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ಪುದುಚೇರಿ ವಿಧಾನಸಭೆಯಲ್ಲಿಂದು ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು. ಶಾಲಾ ಸಮವಸ್ತ್ರ ಧರಿಸಿ ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ವಿಧಾನಸಭೆಗೆ ಹಾಜರಾದರು.
ಪುದುಚೇರಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ನಿರ್ಣಯ ಮಂಡಿಸಿ ಅಂಗೀಕರಿಸಬೇಕೆಂದು ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಅಲ್ಲದೆ ಈ ಸಂಬಂಧ ಪ್ರತಿಭಟನೆ ನಡೆಸಿ ಬಳಿಕ ಸಭಾತ್ಯಾಗ ಮಾಡಿದರು. ಇದಕ್ಕೂ ಮುನ್ನ ಉಭಯ ಪಕ್ಷಗಳ ಸದಸ್ಯರು ಶಾಲಾ ಸಮವಸ್ತ್ರ ಧರಿಸಿ ಸೈಕಲ್ಗಳಲ್ಲಿ ವಿಧಾನಸಭಾ ಅಧಿವೇಶನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.
ಬ್ರಿಟನ್ ರಾಣಿ ಎಲಿಜಬೆತ್ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಲಾಯಿತು. ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಶಿವ, ಪುದುಚೇರಿಗೆ ರಾಜ್ಯ ಸ್ಥಾನಮಾನ ಕೋರಿ ನಿರ್ಣಯ ಮಂಡನೆ ಇಂದು ತೀರಾ ಅಗತ್ಯವಾಗಿರುವ ವಿಚಾರ. ನಿರ್ಣಯದ ಬಗ್ಗೆ ಚರ್ಚೆ ನಡೆಸಲು ಸಮಯ ನೀಡಬೇಕು. ಆ ಬಳಿಕ ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಪುದುಚೇರಿಗೆ ರಾಜ್ಯದ ಸ್ಥಾನಮಾನ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಲೆಫ್ಟಿನೆಂಟ್ ಗವರ್ನರ್ ಅವರು ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಗೆ ರಾಜ್ಯಕ್ಕೆ ನೀಡುವ ಎಲ್ಲಾ ಪ್ರಯೋಜನಗಳೂ ಸಿಗುತ್ತಿದೆ ಎನ್ನುತ್ತಾರೆ. ಈ ಇಬ್ಬರ ಮಾತುಗಳಲ್ಲಿ ಸತ್ಯ ಯಾವುದು, ಸುಳ್ಳು ಯಾವುದು ಎಂಬುದು ಸ್ಪಷ್ಟವಾಗಬೇಕು ಎಂದು ಆಗ್ರಹಿಸಿದರು.