ನವದೆಹಲಿ, ಫೆ 03 (DaijiworldNews/DB): ಅದಾನಿ ಗ್ರೂಪ್ ಷೇರುಗಳ ಕುಸಿತದ ಬಗೆಗಿನ ಚರ್ಚೆಯಿಂದ ಕೇಂದ್ರ ತಪ್ಪಿಸಿಕೊಳ್ಳುತ್ತಿದೆ. ಸರ್ಕಾರಕ್ಕೆ ಈ ವಿಚಾರ ಮುಜುಗರ ಉಂಟಾಗಬಹುದು ಎಂದು ಸರ್ಕಾರ ಭಾವಿಸಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ಅದಾನಿ ಗ್ರೂಪ್ ಷೇರು ಕುಸಿತದ ಬಗ್ಗೆ ಚರ್ಚೆ ಮಾಡಲು ಸರ್ಕಾರ ಅನುಮತಿ ನೀಡದಿರುವುದರ ಹಿಂದೆ ಮುಜುಗರದ ಪ್ರಶ್ನೆ ಇದೆ. ಅದಕ್ಕಾಗಿಯೇ ಪ್ರತಿಪಕ್ಷಗಳು ಈ ವಿಚಾರದ ಬಗ್ಗೆ ಚರ್ಚಿಸಲು ಬೇಡಿಕೆ ಮಂಡಿಸಿದರೂ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.
ದೇಶದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಸಂಸತ್ತು ಸೂಕ್ತ ಸ್ಥಳ. ಆದರೆ ಅಂತಹ ಚರ್ಚೆಗೆ ಅವಕಾಶ ಮಾಡಿಕೊಡುವ ಯೋಗ್ಯತೆಯನ್ನು ಸರ್ಕಾರ ತೋರಿಸದಿರುವುದು ವಿಪರ್ಯಾಸ ಎಂದು ಅವರು ಹರಿ ಹಾಯ್ದರು.
ಅವರು ಚರ್ಚೆಗೆ ಅವಕಾಶ ನೀಡದೇ ಇದ್ದರಿಂದಾಗಿ ಎರಡು ಅಮೂಲ್ಯ ದಿನಗಳನ್ನು ನಾವು ಕಳೆದುಕೊಂಡಿದ್ದೇವೆ. ಅದಾನಿ ಗ್ರೂಪ್ ಸಮಸ್ಯೆ ಬಗ್ಗೆ ಚರ್ಚಿಸಲು ಎಲ್ಲಾ ಪ್ರತಿಪಕ್ಷಗಳು ಒಟ್ಟಾಗಿ ಕಾಯುತ್ತಿವೆ. ಇದು ಅತ್ಯಂತ ಪ್ರಾಮುಖ್ಯ ವಿಚಾರವಾಗಿದ್ದು, ಸರ್ಕಾರ ಈ ವಿಚಾರದಲ್ಲಿನ ಚರ್ಚೆಗೆ ಅವಕಾಶ ನೀಡಬೇಕಾದುದು ಅತಿ ಅಗತ್ಯ ಎಂದವರು ಇದೇ ವೇಳೆ ಪ್ರತಿಪಾದಿಸಿದರು.