ನವದೆಹಲಿ, ಫೆ 03 (DaijiworldNews/DB): ಪಾಟ್ನಾಗೆ ತೆರಳಬೇಕಿದ್ದ ಪ್ರಯಾಣಿಕನೊಬ್ಬನನ್ನು ಉದಯಪುರದಲ್ಲಿ ಇಳಿಸಿದ ಆರೋಪದ ಮೇಲೆ ಇಂಡಿಗೋ ವಿಮಾನ ಯಾನ ಸಂಸ್ಥೆ ವಿರುದ್ದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತನಿಖೆಗೆ ಆದೇಶ ಮಾಡಿದೆ.
ಜನವರಿ 30ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಯಾಣಿಕ ಅಫ್ಸರ್ ಹುಸೇನ್ ಅವರು ಪಾಟ್ನಾಗೆ ಇಂಡಿಗೋ ವಿಮಾನ ಸಂಖ್ಯೆ 6E-214ರಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಪಾಟ್ನಾಕ್ಕೆ ತೆರಳುವ ಈ ವಿಮಾನದ ಬದಲಾಗಿ ಉದಯಪುರಕ್ಕೆ ತೆರಳುವ 6E-319 ವಿಮಾನವನ್ನೇರಿದ್ದರು. ವಿಮಾನ ಪ್ರಯಾಣ ಬೆಳೆಸಿ ಉದಯಪುರದಲ್ಲಿ ಲ್ಯಾಂಡ್ ಆದಾಗ ತಾವು ಬೇರೆಯೇ ವಿಮಾನದಲ್ಲಿ ಪ್ರಯಾಣಿಸಿರುವ ಬಗ್ಗೆ ಹುಸೇನ್ ಅವರಿಗೆ ತಿಳಿಯಿತು. ಕೂಡಲೇ ಅವರು ಉದಯಪುರ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಮರುದಿನ ಅವರನ್ನು ವಿಮಾನಯಾನ ಸಂಸ್ಥೆಯು ಪಾಟ್ನಾಕ್ಕೆ ಕಳುಹಿಸಿಕೊಟ್ಟಿದೆ ಎಂದು ವರದಿಯಾಗಿದೆ.
ಇನ್ನು ಘಟನೆ ಸಂಬಂಧ ವಿಮಾನಯಾನ ಸಂಸ್ಥೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಸಿಎ ಅಧಿಕಾರಿಗಳು ಹೇಳಿದ್ದಾರೆ. ಪ್ರಯಾಣಿಕರ ಬೋರ್ಡಿಂಗ್ ಪಾಸ್ಗಳನ್ನು ಎರಡು ಪಾಯಿಂಟ್ಗಳಲ್ಲಿ ಪರಿಶೀಲಿಸಲಾಗುತ್ತದೆ. ಹಾಗಂದ ಮೇಲೆ ತಪ್ಪಾಗಿ ಇನ್ನೊಂದು ವಿಮಾನಕ್ಕೆ ಹತ್ತಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿರುವ ಡಿಜಿಸಿಎ, ವಿಮಾನ ಯಾನ ಸಂಸ್ಥೆಯ ಸಿಬಂದಿ ಪ್ರಯಾಣಿಕರ ಬೋರ್ಡಿಂಗ್ ಪಾಸ್ನ್ನು ಸಂಪೂರ್ಣ ಸ್ಕ್ಯಾನ್ ಮಾಡಿಲ್ಲ ಎಂದು ಆಪಾದಿಸಿದೆ.