ಮಧ್ಯಪ್ರದೇಶ, ಫೆ (DaijiworldNews/HR): ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯ ಹೊಂದಿರುವ ಶಾದೋಲ್ ಜಿಲ್ಲೆಯಲ್ಲಿ ನ್ಯೂಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹಸುಳೆಗೆ ಚಿಕಿತ್ಸೆಯ ರೂಪದಲ್ಲಿ ಕಾದ ಕಬ್ಬಿಣದ ರಾಡ್ ನಿಂದ 51 ಬಾರಿ ಹೊಟ್ಟೆಗೆ ಚುಚ್ಚಿದ್ದ ಪರಿಣಾಮ ತೀವ್ರ ಉಸಿರಾಟದ ತೊಂದರೆಗೆ ಸಿಲುಕಿ 15 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕುರುಡು ಮೂಢನಂಬಿಕೆಯ ಕರಾಳತೆ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ.
ಇನ್ನು ಮಗುವಿಗೆ ನ್ಯೂಮೋನಿಯಾಗೆ ಚಿಕಿತ್ಸೆ ನೀಡದೆ, ಕಾದ ಕಬ್ಬಿಣದ ಸರಳನ್ನು ಹೊಟ್ಟೆಗೆ ಚುಚ್ಚುವ ಮೂಲಕ ಮಗುವಿನ ಸ್ಥಿತಿ ಚಿಂತಾಜನಕವಾಗಲು ಕಾರಣವಾಗಿತ್ತು ಎಂದು ಶಾದೋಲ್ ಜಿಲ್ಲಾಧಿಕಾರಿ ವಂದನಾ ವೈಧ್ ತಿಳಿಸಿದ್ದಾರೆ.