ಆಂಧ್ರಪ್ರದೇಶ, ಫೆ 05 (DaijiworldNews/HR): ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿರುವ ಶ್ರೀರಾಮ ನರ್ಸಿಂಗ್ ಹೋಂಗೆ ದಾಖಲಾಗಿದ್ದ ಬಾಲಕಿಯ ಹೊಟ್ಟೆಯಿಂದ ಒಂದು ಕಿಲೋಗೂ ಹೆಚ್ಚು ಕೂದಲನ್ನು ವೈದ್ಯರು ತೆಗೆದಿರುವ ಘಟನೆ ವರದಿಯಾಗಿದೆ.
ಬಾಲಕಿಯು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿತ್ತು. ತೂಕ ಸಹ ಕಡಿಮೆಯಾಗಿತ್ತು. ಹೀಗಾಗಿ ಈಕೆಯ ಕುಟುಂಬಸ್ಥರು ತಕ್ಷಣ ಗುಡಿವಾಡದ ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಎಂಡೋಸ್ಕೋಪಿ ಮತ್ತು ಸ್ಕ್ಯಾನಿಂಗ್ ಮಾಡಿ ಬಾಲಕಿಯ ಹೊಟ್ಟೆಯಲ್ಲಿ ಕಪ್ಪು ಗಡ್ಡೆ ಇರುವುದನ್ನು ಕಂಡು ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದಾರೆ.
ಇನ್ನು ಬಾಲಕಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಒಂದು ಕಿಲೋ ಗಡ್ಡೆ ತೆಗೆಯಲಾಗಿದೆ. ವೈದ್ಯರು ಇದನ್ನು ಕೂದಲು ಉಂಡೆ ಎಂದು ಗುರುತಿಸಿದ್ದಾರೆ.
ಟ್ರೈಕೋಬಿಝೋರ್ ಕಾಯಿಲೆಯಿಂದ ಕೆಲವರಿಗೆ ಚಿಕ್ಕಂದಿನಿಂದಲೂ ಕೂದಲು ತಿನ್ನುವ ಅಭ್ಯಾಸವಿರುತ್ತದೆ. ಹುಡುಗಿ ಬಹಳಷ್ಟು ಕೂದಲುಗಳನ್ನು ತಿನ್ನುತ್ತಿದ್ದಳು ಮತ್ತು ಆದ್ದರಿಂದ ಅವು ಹೊಟ್ಟೆಯಲ್ಲಿ ಸಂಗ್ರಹಗೊಂಡು ಜೀರ್ಣಾಂಗದಲ್ಲಿ ದೊಡ್ಡ ಗಡ್ಡೆಯಾಗಿ ಮಾರ್ಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ.
ವೈದ್ಯ ಪೊಟ್ಲೂರಿ ವಂಶಿಕೃಷ್ಣ ಎಂಬುವವರು ಎಂಡೋಸ್ಕೋಪಿ ಸೇರಿದಂತೆ ಹಲವು ಪ್ಯಾಥಲಾಜಿಕಲ್ ಪರೀಕ್ಷೆಗಳನ್ನು ನಡೆಸಿ ಆಕೆಗೆ ಕೂದಲು ತಿನ್ನುವ ಅಭ್ಯಾಸವಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.