ಜೈಪುರ , ಫೆ. 5 (DaijiworldNews/SM): ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಧರ್ಮಗುರುಗಳ ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಯೋಗ ಗುರು ಬಾಬಾ ರಾಮ್ದೇವ್ ಅವರ ವಿರುದ್ಧ ಭಾನುವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ಪಥಾಯಿ ಖಾನ್ ನೀಡಿದ ದೂರಿನ ಆಧಾರದ ಮೇಲೆ ಚೌಹಾಟನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೌಹಾತನ್ ಪೊಲೀಸ್ ಠಾಣೆ ಎಸ್ಎಚ್ಒ ಭೂತರಾಮ್ ಪ್ರಕಾರ, ಐಪಿಸಿ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು), 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ, ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿ ಪ್ರಕರಣ ದಾಖಲಿಸಲಾಗಿದೆ.
ಫೆಬ್ರವರಿ 2 ರಂದು ನಡೆದ ಧರ್ಮಗುರುಗಳ ಸಭೆಯಲ್ಲಿ, ಹಿಂದೂ ಧರ್ಮವನ್ನು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಹೋಲಿಸುವಾಗ, ಮುಸ್ಲಿಮರು ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ ಮತ್ತು ಭಯೋತ್ಪಾದಕರಾಗುತ್ತಾರೆ. ಹಿಂದೂ ಧರ್ಮವು ತನ್ನ ಅನುಯಾಯಿಗಳಿಗೆ ಒಳ್ಳೆಯದನ್ನು ಮಾಡಲು ಕಲಿಸಿದರೆ ಈ ಎರಡು ಧರ್ಮಗಳು ಮತಾಂತರದ ಗೀಳನ್ನು ಹೊಂದಿದ್ದವು ಎಂದು ರಾಮ್ ದೇವ್ ಆರೋಪಿಸಿದ್ದರು.