ಬೆಂಗಳೂರು , ಫೆ. 5 (DaijiworldNews/SM): ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ರಾಜ್ಯ ಸಾರಿಗೆ ಇಲಾಖೆ ಘೋಷಿಸಿದ ಶೇ.50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಹರಿದು ಬರುತ್ತಿದೆ.
ಸಾವಿರಾರು ರೂಪಾಯಿ ದಂಡ ಅರ್ಧದಷ್ಟು ಕಡಿಮೆ ಆಗುತ್ತೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಇಂದು ಸಹ ಮುಗಿಬಿದ್ದಿದ್ದು, ಒಟ್ಟಾರೆ ಕಳೆದ ಮೂರು ದಿನಗಳಲ್ಲಿ 22.3 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ.
ಶೇ.50 ರಷ್ಟು ರಿಯಾಯಿತಿ ಘೋಷಿಸಿದ ಮೊದಲ ದಿನವೇ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಇನ್ನು ಎರಡನೇ ದಿನ ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು. ಮೂರನೇ ದಿನವಾದ ಇಂದು ಭಾನುವಾರ ಎಂದು ಲೆಕ್ಕಿಸದೇ ವಾಹನ ಸವಾರರು ಬಂದು ದಂಡದ ಹಣ ಪಾವತಿಸಿದ್ದಾರೆ. ಇದರಿಂದ 6,31,77,750 ರೂ. ಕಲೆಕ್ಷನ್ ಆಗಿದೆ. ಇದರೊಂದಿಗೆ ಒಟ್ಟು ಮೂರು ದಿನದಲ್ಲಿ ಒಟ್ಟು 22 ಕೋಟಿ 32 ಲಕ್ಷ 47 ಸಾವಿರದ 491 ರೂ. ದಂಡ ವಸೂಲಿಯಾಗಿದೆ.