ಬೆಂಗಳೂರು, ಫೆ 07 ( DaijiworldNews/MS): ಭಾಗ್ ಮಿಲ್ಕಾ ಭಾಗ್ ಎಂಬಂತೆ ಮೋದಿ ಆಡಳಿತದಲ್ಲಿ ಮೆಹುಲ್ ಚೋಕ್ಸಿ,ನೀರವ್ ಮೋದಿ,ಲಲಿತ್ ಮೋದಿ,ಮಲ್ಯ ಸೇರಿದಂತೆ ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಓಡಿ ಹೋಗಿದ್ದಾರೆ.ಈಗ ದೇಶ ಬಿಟ್ಟು ಓಡುವುದು ಅದಾನಿ ಸರದಿ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
ಮೋದಿ ಬೆಂಗಳೂರಿಗೆ ಆಗಮಿಸುತ್ತಿವ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡುರಾವ್, ಅದಾನಿ ಸಮೂಹದ ಮೆಗಾ ಹಗರಣದ ಬಗ್ಗೆ ಪ್ರಧಾನಿ ಮೋದಿಯವರು ಮೌನವಾಗಿರುವುದೇಕೆ, ಅದಾನಿ ವಂಚನೆಯ ಬಗ್ಗೆ ಮಾತಾಡಲು ಮೋದಿಯವರಿಗೆ ಸ್ನೇಹ ಅಡ್ಡಿಯಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸ್ನೇಹಕ್ಕಾಗಿ ದೇಶದ ಲಕ್ಷಾಂತರ ಜನರ ಹೂಡಿಕೆ ಹಣವನ್ನು ಅಪಾಯದಲ್ಲಿಡುತ್ತಿದ್ದಾರೆಯೇ ಮೋದಿ ಪ್ರಧಾನಿ ಮೋದಿಯವರಿಗೆ ದೇಶದ ಜನರ ಹಿತ ಮುಖ್ಯವೋ ಅಥವಾ ಗೌತಮ್ ಅದಾನಿ ಗೆಳೆತನ ಮುಖ್ಯವೋ ಎಂದು ಕೇಳಿದ್ದಾರೆ.
ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದ LICಯ 23 ಸಾವಿರ ಕೋಟಿ, SBI ಕೊಟ್ಟ ಸಾವಿರಾರು ಕೋಟಿ ಸಾಲಕ್ಕೆ ಪಂಗನಾಮ ಗ್ಯಾರಂಟಿ. ಆರ್ಥಿಕ ಅಪರಾಧಗಳ ಬಗ್ಗೆ ತಮ್ಮದು ಝೀರೋ ಟಾಲರೆನ್ಸ್ ನಿಲುವು ಎಂದು ಮೋದಿಯವರು ಹೇಳುತ್ತಾರೆ.ಆದರೆ ಅದಾನಿ ಎಸಗಿದ ಆರ್ಥಿಕ ಅಪರಾಧದ ಬಗ್ಗೆ ಮೋದಿಯವರ ವ್ಯಾಖ್ಯಾನವೇನು?ED,CBI ಮತ್ತು IT ಸಂಸ್ಥೆಗಳು ಕೇವಲ ರಾಜಕೀಯ ವಿರೋಧಿಗಳ ವಿರುದ್ಧ ತನಿಖೆ ಮಾಡುವ ಸಂಸ್ಥೆಗಳೇ. ಮೋದಿಯವರ ಅತ್ಯಾಪ್ತರಿಗೆ ಈ ತನಿಖಾ ಸಂಸ್ಥೆಗಳಿಂದ ವಿನಾಯಿತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ
ಸಾರ್ವಜನಿಕರ ಜೀವನ ಭದ್ರತೆಗಾಗಿ ಕಾಂಗ್ರೆಸ್ 1956ರಲ್ಲಿ LIC ಸ್ಥಾಪಿಸಿತ್ತು. 2021ರ ವರೆಗೆ LICಯಲ್ಲಿದ್ದ ಜನರ ಹಣ ಸುಭದ್ರವಾಗಿತ್ತು.ಆದರೆ 2021ರಲ್ಲಿ ಈ ಸರ್ಕಾರ LIC ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿತ್ತು. LIC ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿದ್ದು ಯಾರ ಅನುಕೂಲಕ್ಕಾಗಿ ಮೋದಿಯವರೇ ಎಂದು ದಿನೇಶ್ ಗುಂಡುರಾವ್ ಸಾಲು ಸಾಲು ಪ್ರಶ್ನೆಗಳನ್ನು ಎಸೆದಿದ್ದಾರೆ.