ಮಂಗಳೂರು, ಫೆ 07 ( DaijiworldNews/MS): ಯಡಿಯೂರಪ್ಪ ಸೇರಿದಂತೆ ಯಾರೇ ನಮ್ಮ ಯಾತ್ರೆ ಪಂಚರ್ ಆಗಲಿದೆ ಎಂದು ಹೇಳಲಿ. ಅಂತಿಮವಾಗಿ ಯಾರು ಪಂಚರ್ ಆಗಲಿದ್ದಾರೆ ಎಂದು ಮತದಾರರು ತೀರ್ಮಾನ ಮಾಡುತ್ತಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆಗೆ ಹೊರಡುವ ಮುನ್ನ, ಮಾಧ್ಯಮದೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಇಂದು ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ನಾನು, ಸಲೀಂ ಅಹ್ಮದ್, ಪರಮೇಶ್ವರ್ ಹಾಗೂ ನಾರಾಯಣ ಸ್ವಾಮಿ ಅವರು ಕಾಂಗ್ರೆಸ್ ಕಚೇರಿಯಿಂದ ತೆರಳುತ್ತಿದ್ದೇವೆ. ಉಳಿದ ನಾಯಕರು ನೇರವಾಗಿ ಅಲ್ಲಿಗೆ ಬರಲಿದ್ದಾರೆ.
ಇದಾದ ನಂತರ ಶಿವಮೊಗ್ಗ ಜಿಲ್ಲೆಯ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಅಲ್ಲಿಂದ ಹೊಸದುರ್ಗ, ಹೊಳಲ್ಕೆರೆ ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಳ್ಳುತ್ತೇವೆ. ನಂತರ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಅದಕ್ಕಾಗಿ ಎರಡು ಮೂರು ದಿನ ವಿರಾಮ ಇರಲಿದೆ. ನಂತರ ಮಂಡ್ಯ, ಮೈಸೂರು ಜಿಲ್ಲೆಯ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ ಎಂದು ಮಾಹಿತಿ ನೀಡಿದರು.
ಯಾತ್ರೆ ಕುರಿತು ಅನ್ಯ ಪಕ್ಷಗಳ ನಾಯಕರ ಟೀಕೆ ಬಗ್ಗೆ ಪ್ರಶ್ನಿಸಿದಾಗ , 'ಸಿದ್ದರಾಮಯ್ಯ ಅವರು ನಿರಂತರ ಪ್ರವಾಸ ವೇಳಾಪಟ್ಟಿ ನಿಗದಿ ಮಾಡಿಕೊಂಡಿದ್ದಾರೆ. ನಾವು ಇಲ್ಲಿ ಹತ್ತಿರದ ಕ್ಷೇತ್ರಗಳಿಗೆ ಬೆಂಗಳೂರಿನಿಂದ ತೆರಳುತ್ತಿದ್ದೇವೆ. ನಾವು ಎಲ್ಲೆ ಹೋದರು ನಮಗೆ ಜನರಿಂದ ಸಿಗುತ್ತಿರುವ ಬೆಂಬಲಕ್ಕೆ ಮಾಧ್ಯಮಗಳ ಕ್ಯಾಮೆರಾಗಳು ಸಾಕ್ಷಿ. ನಮಗೆ ಸಿಗುತ್ತಿರುವ ಜನ ಬೆಂಬಲದಿಂದ ಬಿಜೆಪಿ ಹಾಗೂ ದಳದವರಿಗೆ ಭೀತಿ ಎದುರಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಇತ್ತೀಚೆಗೆ ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿದೆ. ನಾವು ಈ ಯೋಜನೆಗೆ ಹಣ ನೀಡಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬಹುದಾಗಿತ್ತು. ಮೇಕೆದಾಟು ಯೋಜನೆಗೆ ಅನುಮತಿ ನೀಡಬಹುದಿತ್ತು. ಕಾವೇರಿ ನೀರು ಹಂಚಿಕೆ ವಿಚಾರವಾಗಿ ನಾನು ನಿನ್ನೆ ತಾಂತ್ರಿಕ ತಂಡದ ಜತೆ ಸಭೆ ಮಾಡಿದ್ದೇನೆ. ನಾವು ರೈತರನ್ನು ರಕ್ಷಿಸುವ ಕಾರ್ಯಕ್ರಮ ಮಾಡುತ್ತೇವೆ. ಯಡಿಯೂರಪ್ಪ ಸೇರಿದಂತೆ ಯಾರೇ ನಮ್ಮ ಯಾತ್ರೆ ಪಂಚರ್ ಆಗಲಿದೆ ಎಂದು ಹೇಳಲಿ. ಅಂತಿಮವಾಗಿ ಯಾರು ಪಂಚರ್ ಆಗಲಿದ್ದಾರೆ ಎಂದು ಮತದಾರರು ತೀರ್ಮಾನ ಮಾಡುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.