ವಿಜಯನಗರ, ಫೆ 06 ( DaijiworldNews/MS): ಸುಮ್ಮಸುಮ್ಮನೆ ಹೆದರಿಸಲು ಬಂದರೆ ನನಗೂ ತೊಡೆ ತಟ್ಟಿ ನಿಲ್ಲಲು ಗೊತ್ತಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರೋಧಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಇಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿ, ಮಾತನಾಡಿದ ಅವರು, ಯಾರಿಗೂ ಹೆದರುವ ಜನ ನಾನಲ್ಲ. ನ್ಯಾಯಕ್ಕೆ ಮಾತ್ರ ತಲೆಬಾಗುತ್ತೇನೆ, ಸುಮ್ಮಸುಮ್ಮನೆ ಹೆದರಿಸಲು ಬಂದರೆ ನನಗೂ ತೊಡೆ ತಟ್ಟಿ ನಿಲ್ಲಲು ಗೊತ್ತಿದೆ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವ ಜಾಯಮಾನ ನನ್ನದಲ್ಲ. ರಾಜಕೀಯದಲ್ಲಿ ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ, ಸೋಲು ಗೆಲುವು ಎಲ್ಲವನ್ನು ಕಂಡಿದ್ದೇನೆ, ಸೋತಾಗ ಹೆದರಿ ಮನೆ ಸೇರಲಿಲ್ಲ, ಸೋತಾಗಲೂ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದ್ದೆ, ಗೆದ್ದಾಗಲೂ ಸಾಮಾಜಿಕ ನ್ಯಾಯ ಪರವಾಗಿ ಇದ್ದೆ, ಮುಂದೆಯೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ ಎಂದು ಹೇಳಿದ್ದಾರೆ
" ಜನ ನನ್ನನ್ನು ಟಗರು ಎಂದು ಪ್ರೀತಿಯಿಂದ ಕರೆಯುತ್ತಾರೆ, ನಾನು ಸಮಾಜದಲ್ಲಿನ ಎಲ್ಲಾ ಜಾತಿಗಳ ಬಡಜನರಿಗೆ ಸಹಾಯ ಮಾಡಬೇಕು ಎಂದು ಕೆಲಸ ಮಾಡಿದ್ದೆ, ನಾನು ಕುರುಬ ಜಾತಿಯವನು ಎನ್ನುವ ಕಾರಣಕ್ಕೆ ಟಗರು ಎನ್ನುವುದಲ್ಲ. ನಾವು ಅನ್ನಭಾಗ್ಯ ಅಕ್ಕಿಯನ್ನು ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸಿ ಜಾರಿ ಮಾಡಿರಲಿಲ್ಲ ಎಲ್ಲಾ ಬಡವರಿಗೆ ನೀಡಿದ್ದೇವು. ಕೃಷಿ ಭಾಗ್ಯ ಯೋಜನೆಯನ್ನು ಬರೀ ಕುರುಬ ಜಾತಿಯ ರೈತರಿಗೆ ಮಾತ್ರ ನೀಡಿರಲಿಲ್ಲ, ಶೂಭಾಗ್ಯ, ಇಂದಿರಾ ಕ್ಯಾಂಟೀನ್, ವಿದ್ಯಾಸಿರಿ, ಶಾದಿ ಭಾಗ್ಯ, ಇವೆಲ್ಲ ಯೋಜನೆಯನ್ನು ಬರೀ ಹಿಂದುಳಿದ ಜಾತಿಗಳಿಗೆ ಸೀಮಿತವಾಗಿ ಜಾರಿ ಮಾಡಿರಲಿಲ್ಲ, ಈ ನಾಡಿನಲ್ಲಿ ಆರ್ಥಿಕವಾಗಿ ಯಾರೆಲ್ಲ ದುರ್ಬಲರಿದ್ದಾರೆ ಅವರಿಗೆ ಸಹಾಯವಾಗಲಿ ಎಂದು ಮಾಡಿರುವುದು ಎಂದು ಹೇಳಿದ್ದಾರೆ.