ಮಂಡ್ಯ, ಫೆ 06 ( DaijiworldNews/MS): ಬ್ರಾಹ್ಮಣರು ಭಾರತದ ಪ್ರಜೆಗಳಲ್ಲವೇ, ಯಾಕೆ ಬ್ರಾಹ್ಮಣ ಸಮುದಾಯದವರು ಸಿಎಂ ಆಗಬಾರದೇ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ , ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದು, ಅವರ ಕುರಿತು ಏನು ಮಾತಾಡಿದ್ರೂ ನಡೆಯುತ್ತೆ ಎಂಬ ಭಾವನೆ ಇದೆ. ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧವಾಗಿ ಹೇಳಿಕೆಗಳು ನೀಡಲಾಗುತ್ತಿದೆ. ಬ್ರಾಹ್ಮಣರು ಭಾರತದ ಪ್ರಜೆಗಳು ಅಲ್ಲವೇ? ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಎಷ್ಟು ಶಾಸಕರು ಇದ್ದಾರೆ? ಸಮುದಾಯದ ಎಷ್ಟು ಜನರಿಗೆ ಟಿಕೆಟ್ ನೀಡಿದ್ದಾರೆ? ಎಂದು ಸವಾಲೆಸೆದಿದ್ದಾರೆ.
ಬ್ರಾಹ್ಮಣ ಸಮಾಜವನ್ನು ದೂರಬೇಕೆಂದು ಏನಾದರೂ ನೆಪ ಮಾಡಿ ದೂರುತ್ತಾರೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು. ಇವತ್ತು ಯಾವುದೋ ಸಮಾಜ, ಧರ್ಮದ ಪರವಾಗಿ ಸರ್ಕಾರ ನಡೆಯುತ್ತಿದೆಯೇ? ಅನ್ಯಾಯವಾದಾಗ ಒಂದು ಧರ್ಮದ ವಿರುದ್ದ ಮತ್ತೊಂದು ಧರ್ಮ ಪುಟಿ ದೇಳುವುದು ಸಹಜ. ಪ್ರಜಾಪ್ರಭುತ್ವ ಸಮಾಜದಲ್ಲಿ ಒಂದು ಧರ್ಮವನ್ನ ದೂಷಿಸುವುದು ಸರಿಯಲ್ಲ. ಯಾವ ಧರ್ಮದವರಿಗೂ ಅನ್ಯಾಯ ಆಗಬಾರದು ಎಂದು ಪೇಜಾವರಶ್ರೀ ಹೇಳಿದ್ದಾರೆ.