ನವದೆಹಲಿ, ಫೆ 07 ( DaijiworldNews/MS): ಟರ್ಕಿಯಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗಾಗಲೇ ೪೫೦೦ ದಾಟಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಟರ್ಕಿಗೆ ಭಾರತ ಮಾನವೀಯ ನೆರವಿನ ಮೊದಲ ತಂಡವನ್ನು ಮಂಗಳವಾರ ರವಾನಿಸಿದೆ.
ಟರ್ಕಿಯಲ್ಲಿ ಭೂಕಂಪದಲ್ಲಿ ಸಂತ್ರಸ್ತರಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ರಕ್ಷಣಾ ತಂಡವನ್ನು ಹೊತ್ತು ಭಾರತೀಯ ವಾಯುಪಡೆಯ ಸಿ -17 ವಿಮಾನ್ ಟರ್ಕಿಗೆ ಹಾರಿದೆ.
ಮೊದಲ ಬ್ಯಾಚ್ ನಲ್ಲಿ ಡೆಪ್ಯುಟಿ ಕಮಾಂಡೆಂಟ್ ದೀಪಕ್ ತಲ್ವಾರ್ ನೇತೃತ್ವದ 51 ಸದಸ್ಯರ ಎನ್ಡಿಆರ್ಎಫ್ ತಂಡ , ವಿಶೇಷವಾಗಿ ತರಬೇತಿ ಪಡೆದ ಶ್ವಾನದಳಗಳು, ವೈದ್ಯಕೀಯ ಸರಬರಾಜುಗಳು, ಡ್ರಿಲ್ಲಿಂಗ್ ಯಂತ್ರಗಳು, ವೈದ್ಯಕೀಯ ಸಾಮಾಗ್ರಿ, ಇತರ ಅಗತ್ಯ ಉಪಕರಣಗಳೊಂದಿಗೆ ಭೂಕಂಪ ಪರಿಹಾರ ಸಾಮಗ್ರಿಗಳನ್ನು ಹೊತ್ತು ಮಂಗಳವಾರ ಮುಂಜಾನೆ ಘಾಜಿಯಾಬಾದ್ನ ಹಿಂಡನ್ ವಿಮಾನ ನಿಲ್ದಾಣದಿಂದ ಹೊರಟಿದೆ.
ಇದಲ್ಲದೇ ಇನ್ನೊಂದು ಬ್ಯಾಚ್ ಕೂಡಾ ಸಿದ್ದವಾಗಿದ್ದು , ಅಗತ್ಯ ಔಷಧಗಳೊಂದಿಗೆ ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಪಡಿಸಲಾಗಿದೆ. ರಿಪಬ್ಲಿಕ್ ಆಫ್ ಟರ್ಕಿಯೆ ಸರ್ಕಾರ ಮತ್ತು ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾನ್ಬುಲ್ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯೊಂದಿಗೆ ಸಮನ್ವಯದೊಂದಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲು ಭಾರತ ಸರ್ಕಾರ ಸಿದ್ದತೆ ಮಾಡಿಕೊಂಡಿದೆ.