ಚಿತ್ರದುರ್ಗ, ಫೆ 07 (DaijiworldNews/HR): ಬಿಜೆಪಿಯವರು ಜಾತಿ, ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಮೂರುವರೆ ವರ್ಷದಿಂದ ಆಪರೇಷನ್ ಲೋಟಸ್ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಆಪರೇಷನ್ ಲೋಟಸ್ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವ ಹೊಂದಿರುವ ಪಕ್ಷವಾಗಿದ್ದು, ಕಾಂಗ್ರೆಸ್ ಈ ದೇಶದ ಶಕ್ತಿ ಹಾಗೂ ದೇಶದ ಇತಿಹಾಸವಾಗಿದೆ. ನಮ್ಮ ಪಕ್ಷ ಎಲ್ಲ ವರ್ಗದ ಜನರ ಬಗ್ಗೆಯೂ ಚಿಂತನೆ ಮಾಡುತ್ತಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲಾಗುತ್ತದೆ ಎಂದು ಈ ಡಬಲ್ ಇಂಜಿನ್ ಸರ್ಕಾರ ಹೇಳಿಕೊಂಡು ಬಂದಿದೆ. ಆದರೆ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದಲ್ಲಿ ಒಪ್ಪಿಗೆ ಸಿಕ್ಕಿಲ್ಲ. ಮಾನ, ಮರ್ಯಾದೆ ಇದ್ದರೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮತ ಕೇಳಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.