ನವದೆಹಲಿ, ಫೆ 08 (DaijiworldNews/DB): ಮತದಾರರಿಗೆ ಹಣದ ಆಮಿಷ ಒಡ್ಡಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದ ನಿಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದೆ.
ಮುಂಬರುವ ಚುನಾವಣೆಯಲ್ಲಿ ಮತದಾರರಿಗೆ ತಲಾ ಆರು ಸಾವಿರ ರೂ. ನೀಡಲಾಗುವುದು. ಅಲ್ಲದೆ ಪ್ರತಿಸ್ಪರ್ಧಿಗಳಿಗಿಂತ ಹತ್ತು ಕೋಟಿ ರೂ. ಹೆಚ್ಚು ಖರ್ಚು ಮಾಡಲೂ ಸಿದ್ದ ಎಂಬುದಾಗಿ ಜಾರಕಿಹೊಳಿ ಅವರು ಮತದಾರರಿಗೆ ಆಮಿಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಸಂಬಂಧ ಜನವರಿ 25ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಆಯೋಗಕ್ಕೂ ದೂರು ನೀಡಲಾಗಿತ್ತು. ಆದರೆ, ಆಯೋಗದ ಅಧಿಕಾರಿಗಳು, ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನು ಮತದಾರರಿಗೆ ಆಮಿಷ ಒಡ್ಡಿರುವ ರಮೇಶ್ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರೇರೇಪಿಸಿದ್ದಾರೆ. ಈ ಸಂಬಂಧ ಸಮಗ್ರವಾಗಿ ತನಿಖೆಯಾಗಬೇಕು. ಚುನಾವಣಾ ಪ್ರಕ್ರಿಯೆಯನ್ನು ನಾಶಪಡಿಸಲು ಬಿಜೆಪಿ ಹೊರಟಿದೆ. ಅಲ್ಲದೆ ಲಂಚ ನೀಡಿ ಪ್ರಜಾಪ್ರಭುತ್ವವನ್ನೇ ಹೈಜಾಕ್ ಮಾಡಲು ಯತ್ನಿಸುತ್ತಿದೆ. ಇಂತಹ ಪಿತೂರಿ ಬಗ್ಗೆ ಆಯೋಗ ಶೀಘ್ರ ತನಿಖೆ ನಡೆಸಬೇಕು ಎಂದು ನಿಯೋಗ ಒತ್ತಾಯಿಸಿದೆ.