ನಾಂದೇಡ್, ಫೆ 08 (DaijiworldNews/DB): ನಾನು ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾರತಕ್ಕೆ ಫೈಜರ್ ಕೋವಿಡ್ ಲಸಿಕೆ ತರಿಸಲು ಚಿಂತನೆ ನಡೆಸಿದ್ದವು. ಆದರೆ ಅದರ ಆಮದಿಗೆ ಮೋದಿ ಸರ್ಕಾರ ಅಡ್ಡಗಾಲು ಹಾಕಿತ್ತು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದ ರ್ಯಾಲಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೈಜರ್ ಲಸಿಕೆ ಭಾರತಕ್ಕೆ ಆಮದಾಗದಂತೆ ತಡೆಯಲು ಎಲ್ಲಾ ಹುನ್ನಾರಗಳನ್ನು ಮೋದಿ ಸರ್ಕಾರ ಮಾಡಿತ್ತು. ಮೇಕ್ ಇನ್ ಇಂಡಿಯಾವು ದೇಶದಲ್ಲಿ ಜೋಕ್ ಆಗಿ ಮಾರ್ಪಟ್ಟಿದೆ ಎಂದು ಲೇವಡಿ ಮಾಡಿದರು.
ತಂಡೋಪತಂಡವಾಗಿ ಚೀನಾ ತೊರೆಯುವ ಬಹು ರಾಷ್ಟ್ರೀಯ ಕಂಪೆನಿಗಳನ್ನು ಆಕರ್ಷಿಸಲು ನಮ್ಮಿಂದ ಏಕೆ ಸಾಧ್ಯವಾಗುತ್ತಿಲ್ಲ? ಅವರು ನಮ್ಮ ಕಡೆ ತಿರುಗಿ ನೋಡದಿರಲು ಕಾರಣವೇನು? ಮೇಕ್ ಇನ್ ಇಂಡಿಯಾ ಸರಿಯಾಗಿರುತ್ತಿದ್ದರೆ, ಈ ಎಲ್ಲಾ ವಿಚಾರಗಳೂ ಸರಿಯಾಗಿಯೇ ಇರುತ್ತಿದ್ದವು ಎಂದು ಕಿಡಿ ಕಾರಿದರು.
ಫೈಜರ್ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಪ್ರಧಾನ ಮಂತ್ರಿ ಕಚೇರಿ ಮತ್ತು ನೀತಿ ಆಯೋಗದ ಅಧಿಕಾರಿಗಳೊಂದಿಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದರು. ಅತ್ಯುತ್ತಮ ಲಸಿಕೆಯನ್ನು ಜನರಿಗೆ ನೀಡಲು ಬಯಸಲಾಗಿತ್ತು. ಆದರೆ ಆ ಕಂಪೆನಿಯ ಲಸಿಕೆ ಆಮದು ಮಾಡಿಕೊಳ್ಳದಿರಲು ಸರ್ಕಾರ ತಡೆ ಹೇರಿತು ಎಂದು ಆಪಾದಿಸಿದರು.