ನವದೆಹಲಿ, ಫೆ 08 (DaijiworldNews/DB): ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರವನ್ನು ಲಖನಪುರ್ ಅಥವಾ ಲಕ್ಷ್ಮಣಪುರ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯಿಸಿ ಪ್ರತಾಪಗಢ ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ ಹಲವು ದಿನಗಳಿಂದಲೂ ಲಖನೌ ಹೆಸರು ಬದಲಾವಣೆಯ ಬೇಡಿಕೆ ಇದೆ. ಶ್ರೀರಾಮನು ಈ ನಗರವನ್ನು ಕಾಣಿಕೆಯಾಗಿ ಲಕ್ಷ್ಮಣನಿಗೆ ನೀಡಿದ್ದ ಎಂಬುದು ಪ್ರಾಚೀನ ನಂಬಿಕೆ. ಆ ಕಾಲದಲ್ಲಿ ಲಖನ್ಪುರ, ಲಕ್ಷ್ಮಣಪುರ ಎಂದೇ ಈ ಪ್ರದೇಶವನ್ನು ಕರೆಯಲಾಗುತ್ತಿತ್ತು. ಹೀಗಾಗಿ ಅದೇ ಹೆಸರನ್ನು ಮರು ನಾಮಕರಣ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
18ನೇ ಶತಮಾನದಲ್ಲಿ ಆಗಿನ ನವಾಬ್ ಅಸಫ್ ಉದ್ ದೌಲಾ ಈ ನಗರಕ್ಕೆ ಲಖನೌ ಎಂದು ಹೆಸರಿಟ್ಟ. ಅಲ್ಲಿಂದ ಅದೇ ಹೆಸರಿನಿಂದ ನಗರ ಕರೆಯಲ್ಪಡುತ್ತಿದೆ. ಮೂಲ ಹೆಸರನ್ನು ಶಾಶ್ವತವಾಗಿರಿಸಲು ಮರು ನಾಮಕರಣ ಅಗತ್ಯ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.