ನವದೆಹಲಿ, ಫೆ 08 (DaijiworldNews/DB): ರಾಹುಲ್ ಗಾಂಧಿ ಸಹಿತ ಕೆಲವು ಕಾಂಗ್ರೆಸ್ ನಾಯಕರು ಲೋಕಸಭೆಯಲ್ಲಿ ನಿನ್ನೆ ಮಾಡಿರುವ ಟೀಕೆಗಳು ಆಕ್ಷೇಪಾರ್ಹ ಮತ್ತು ಆಧಾರರಹಿತ. ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಸಂಸತ್ತಿನ ನಿಯಮಗಳ ಅಡಿಯಲ್ಲಿ ಯಾರದ್ದೇ ವಿರುದ್ದ ಆರೋಪ ಮಾಡುವ ಮುನ್ನ ಮುಂಚಿತವಾಗಿ ನೋಟಿಸ್ ನೀಡಬೇಕು. ರಾಹುಲ್ ಗಾಂಧಿಯವರು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ಅವುಗಳನ್ನು ದಾಖಲೆಗಳಿಂದ ತೆಗೆದು ಹಾಕಬೇಕು ಎಂದು ಅವರು ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು.
ರಾಹುಲ್ ಹೇಳಿಕೆ ವಿರುದ್ದ ವಿಶೇಷ ಹಕ್ಕುಚ್ಯುತಿ ಮಂಡಿಸಲಾಗುವುದು. ಈಗಾಗಲೇ ನೀಡಿರುವ ಹಕ್ಕುಚ್ಯುತಿ ನೋಟಿಸ್ ದೃಢೀಕರಣಗೊಂಡಿಲ್ಲ. ಪರಿಶೀಲಿಸಿ ತೀರ್ಮಾನಿಸುವುದಾಗಿ ಸ್ಪೀಕರ್ ಹೇಳಿದ್ದಾರೆ ಎಂದು ಜೋಶಿ ತಿಳಿಸಿದರು.
2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಾಗಿನಿಂದ ಗೌತಮ್ ಅದಾನಿ ಶ್ರೀಮಂತರ ಪಟ್ಟಿಯಲ್ಲಿ ಗುರ್ತಿಸಿಕೊಂಡಿದ್ದಾರೆ. ಅಲ್ಲದೆ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 609 ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದ್ದಾರೆಂದು ಆಪಾದಿಸಿದರು. ರಾಹುಲ್ ಹೇಳಿಕೆಗೆ ಆಡಳಿತ ಪಕ್ಷ ಬಿಜೆಪಿ ನಿನ್ನೆ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿತು. ಪುರಾವೆರಹಿತ ಆರೋಪ ಮಾಡುವುದು ಸಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆಕ್ಷೇಪಿಸಿದ್ದರು.