ನವದೆಹಲಿ, ಫೆ 08 (DaijiworldNews/DB): ವಿಶ್ವದ ಐದನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಭಾರತ ಮುನ್ನುಗ್ಗುತ್ತಿದೆ. ಇಡೀ ಪ್ರಪಂಚದ ಸಮೃದ್ದ ರಾಷ್ಟ್ರಗಳ ಪೈಕಿ ಭಾರತ ಒಂದು ಎನ್ನಲು ಹೆಮ್ಮೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಬುಧವಾರ ಮಾತನಾಡಿದ ಅವರು, ಜಿ20 ಶೃಂಗಸಭೆಗೆ ಅಧ್ಯಕ್ಷತೆ ವಹಿಸಲು ಸಿಕ್ಕಿರುವ ಅವಕಾಶ ನಮ್ಮ ಪಾಲಿನ ಸೌಭಾಗ್ಯ. ಇದು ದೇಶದ ಜನತೆಗೆ ಸಿಕ್ಕಿದ ಗೌರವ. ಆದರೂ ಕೆಲವರು ಅಸಮಾಧಾನಗೊಂಡಿರುವುದು ಯಾಕೆಂಬುದು ಅರ್ಥವಾಗುತ್ತಿಲ್ಲ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನು ಇದೇ ವೇಳೆ ಪ್ರಧಾನಿ ಮೋದಿ ಲೇವಡಿ ಮಾಡಿದರು. ಕೆಲವರು ಜಿಗಿಯುತ್ತಿದ್ದಾರೆ. ಇಡೀ ವ್ಯವಸ್ಥೆಯೇ ಅವರ ಭಾಷಣಕ್ಕೆ ನಲುಗುತ್ತಿದೆ ಎಂದು ಭಾವಿಸಿದ್ದಾರೆ. ಆದರೆ ಅಂತಹ ಸ್ಥಿತಿ ಈವರೆಗೂ ಬಂದಿಲ್ಲ. ಅಧಿಕಾರಕ್ಕೆ ಮರಳುವ ಭ್ರಮೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಕುಟುಕಿದರು.