ನವದೆಹಲಿ, ಫೆ 08 (DaijiworldNews/DB): ಫೆಬ್ರವರಿ 14ರಂದು ಪ್ರೇಮಿಗಳ ದಿನದ ಬದಲಾಗಿ ಹಸು ಅಪ್ಪುಗೆಯ ದಿನವನ್ನಾಗಿ ಆಚರಿಸುವಂತೆ ಕೇಂದ್ರ ಸರ್ಕಾರ ಕರೆ ನೀಡಿದೆ. ಈ ಸಂಬಂಧ ಪ್ರಾಣಿ ಸಂರಕ್ಷಣಾ ಮಂಡಳಿ ವಿಶೇಷ ಸುತ್ತೋಲೆ ಹೊರಡಿಸಿದೆ.
ಗೋವು ಭಾರತೀಯ ಸಂಸ್ಕೃತಿ ಮತ್ತು ಸ್ಥಳೀಯ ಆರ್ಥಿಕತೆಯ ಬೆನ್ನೆಲೆಬು. ಈ ಹಿನ್ನೆಲೆಯಲ್ಲಿ ಫೆಬ್ರವರಿ 14ನ್ನು ಹಸು ಅಪ್ಪುಗೆಯ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ಭಾರತೀಯ ಮೂಲ ಪರಂಪರೆ ಹಾಳಾಗುತ್ತಿದೆ. ಪ್ರೇಮಿಗಳ ದಿನ ಸೇರಿದಂತೆ ಪಾಶ್ಚಿಮಾತ್ಯ ಸಂಸ್ಕೃತಿಗಳು ನಮ್ಮ ಸಂಪ್ರದಾಯಗಳ ನಾಶಕ್ಕೆ ಕಾರಣವಾಗುತ್ತಿದೆ. ಗೋವಿನ ಮಹತ್ವ ನಮ್ಮ ದೇಶದಲ್ಲಿ ತೀರಾ ದೊಡ್ಡದು. ಅದನ್ನು ಅರಿತುಕೊಂಡು ಕೌ ಹಗ್ ಡೇ ಆಚರಣೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಫೆಬ್ರವರಿ 6ರಂದು ಹೊರಡಿಸಿರುವ ಸುತ್ತೋಲೆಗೆ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವಾಲಯ ಅನುಮೋದನೆ ನೀಡಿದೆ.
ಇನ್ನು ಪ್ರಾಣಿ ಸಂರಕ್ಷಣಾ ಮಂಡಳಿ ಹೊರಡಿಸಿರುವ ಸುತ್ತೋಲೆಯನ್ನು ವಿವಿಧ ಬಲಪಂಥೀಯ ಸಂಘಟನೆಗಳು ಬೆಂಬಲಿಸಿವೆ.