ನವದೆಹಲಿ, ಫೆ 08 (DaijiworldNews/DB): 'ಆಪರೇಷನ್ ದೋಸ್ತ್' ಹೆಸರಿನಲ್ಲಿ ಭಾರತವು ಟರ್ಕಿಗೆ ಸಹಾಯಹಸ್ತ ಚಾಚಲು ಪಾರುಗಾಣಿಕಾ ತಂಡಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಈ ಸಂಬಂಧ ಬುಧವಾರ ಟ್ವೀಟ್ ಮಾಡಿರುವ ಅವರು, ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ವಿವಿಧ ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಆಪರೇಷನ್ ದೋಸ್ತ್ ಅಡಿಯಲ್ಲಿ ಭಾರತ ನೆರವು ನೀಡುತ್ತಿದೆ. ಭಾರತವು ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೂ ಸ್ಥಿರವಾದ ಸಂಬಂಧ ಹೊಂದಿದೆ. ನಮ್ಮದು ವಸುದೈವ ಕುಟುಂಬಕಂ ಎಂದು ನಂಬಿರುವ ರಾಷ್ಟ್ರ. ಮಾನವೀಯ ಸೇವೆಗಾಗಿ ಭಾರತ ಸದಾ ಸಿದ್ದ ಎಂದಿದ್ದಾರೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ಹೊರ ತೆಗೆಯಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯುತ್ತಿದೆ.