ನವದೆಹಲಿ, ಫೆ 08 (DaijiworldNews/DB): ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಧರಿಸಿರುವ ಸ್ಕಾರ್ಫ್ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಜೆಟ್ ಅಧಿವೇಶನಕ್ಕೆ ದುಬಾರಿ ಬೆಲೆಯ ಸ್ಕಾರ್ಫ್ ಧರಿಸಿ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದಾರೆ. ಇದರ ಬೆಲೆ 50 ಸಾವಿರ ರೂ.ಗಳಾಗಿವೆ ಎಂದು ಬಿಜೆಪಿ ಕಿಡಿ ಕಾರಿದೆ.
ದುಬಾರಿ ಬೆಲೆಯ ಸ್ಕಾರ್ಫ್ ಧರಿಸಿ ಖರ್ಗೆಯವರು ಬಜೆಟ್ ಅಧಿವೇಶನಕ್ಕೆ ಬಂದಿದ್ದಾರೆ. ಆದರೆ ಪ್ರಧಾನಿ ಮೋದಿಯವರು ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಲಾದ ಜಾಕೆಟ್ ಧರಿಸಿ ಬಂದಿದ್ದಾರೆ. ಅಭಿರುಚಿಗೆ ತಕ್ಕಂತೆ ಉಡುಗೆ ತೊಡುಗೆ ತೊಟ್ಟು ಸಂದೇಶ ರವಾನಿಸುತ್ತಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಟ್ವೀಟ್ ಮಾಡಿದ್ದಾರೆ.
ಸುಸ್ಥಿರ ಅಭಿವೃದ್ದಿ, ಪರಿಸರ ರಕ್ಷಣೆಯ ಸಂದೇಶವನ್ನು ಮೋದಿ ರವಾನಿಸಿದ್ದಾರೆ. ಅದಕ್ಕಾಗಿಯೇ ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟ ನೀಲಿ ಜಾಕೆಟ್ ಧರಿಸಿದ್ದಾರೆ. ಆ ಮೂಲಕ ಗ್ರೀನ್ ಮೆಸೇಜ್ನ್ನು ಜನರಿಗೆ ನೀಡಿದ್ದಾರೆ. ಆದರೆ ಖರ್ಗೆ ದುಬಾರಿ ಬೆಲೆಯ ಸ್ಕಾರ್ಫ್ ತೊಟ್ಟು ಬಂದಿದ್ದಾರೆ ಎಂದು ಕುಟುಕಿದ್ದಾರೆ.
ಇನ್ನು ಈ ಸಂಬಂಧ ನೆಟ್ಟಿಗರು ಕೂಡಾ ಖರ್ಗೆ ಕಾಲೆಳೆದಿದ್ದಾರೆ. ಪಾಪ ಕಡು ಬಡತನದಿಂದ ಬಂದಂತಹ ಕಲಬುರ್ಗಿಯ ಖರ್ಗೆ, ಲೂಯಿಸ್ ವಿಟ್ಟಾನ್ ನ ರೂ 40000 ರೂಪಾಯಿಗಳ ಶಾಲು ಬಳಸುತ್ತಾರೆ. ವಾಹ್ ವಾಹ್ ಖರ್ಗೆ ಜಿ... ಕ್ಯಾ ಬಾತ್ ಎಂಬುದಾಗಿ ಅನೂಪ್ ಕುಲಕರ್ಣಿ ಎಂಬ ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಆದರ್ಶ್ ಹೆಗ್ಡೆ ಎಂಬವರು ಟ್ವೀಟ್ ಮಾಡಿ, ಮೋದಿ ಸರ್ಕಾರವನ್ನು ಸೂಟು ಬೂಟಿನ ಸರ್ಕಾರ ಎಂದವರು ಈಗ ವಾಸ್ತವವನ್ನು ತೋರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.