ನವದೆಹಲಿ, ಫೆ 08 (DaijiworldNews/SM): ಪ್ರಬಲ ಭೂಕಂಪನದಿಂದಾಗಿ ಟರ್ಕಿ-ಸಿರಿಯಾದಲ್ಲಿ ಸಾವಿರಾರು ಸಾವು ನೋವು ಸಂಭವಿಸಿದ್ದು, 10 ಮಂದಿ ಭಾರತೀಯರು ಸಿಲುಕಿದ್ದಾರೆ. ಈ ನಡುವೆ ಮತ್ತೋರ್ವ ಭಾರತೀಯ ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಮಾಹಿತಿ ನೀಡಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಇದೇ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪನದಿಂದ ಈ ವರೆಗೂ 11 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 12 ಸಾವಿರ ಗಡಿ ದಾಟುವ ಆತಂಕ ಎದುರಾಗಿದೆ. ಟರ್ಕಿ ಮತ್ತು ಸಿರಿಯಾ ಉಭಯ ದೇಶಗಳಲ್ಲಿ ಸಾವು–ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಏಕನ್ಮಧ್ಯೆ ಭಾರತ ಸರ್ಕಾರ ಕೂಡ ಭೂಕಂಪನ ಪೀಡಿತ ಸಿರಿಯಾ-ಟರ್ಕಿ ದೇಶಗಳಿಗೆ ಆಪರೇಷನ್ ದೋಸ್ತ್ ಕಾರ್ಯಾಚರಣೆಯಡಿಯಲ್ಲಿ ಸರ್ವಾಂಗೀಣ ನೆರವು ನೀಡುತ್ತಿದೆ.
ಈಗಾಗಲೇ ಭಾರತೀಯ ಸೇನೆ ವಿಮಾನಗಳು ಫೀಲ್ಡ್ ಆಸ್ಪತ್ರೆ, ಔಷಧಗಳು, ರಕ್ಷಣಾ ತಂಡಗಳು ಸೇರಿದಂತೆ ಹಲವು ರಕ್ಷಣಾ ಮತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತು ಟರ್ಕಿ-ಸಿರಿಯಾಗೆ ಹಾರುತ್ತಿವೆ. ಇದರ ನಡುವೆ ಹಾಲಿ ಪರಿಸ್ಥಿತಿ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದ್ದು, ಸಿರಿಯಾ-ಟರ್ಕಿಯಲ್ಲಿ 10 ಭಾರತೀಯರು ಸಿಲುಕಿದ್ದು, ಮತ್ತೋರ್ವ ಭಾರತೀಯ ನಾಪತ್ತೆಯಾಗಿದ್ದಾರೆ ಎಂದು ಹೇಳಿದೆ.