ಶ್ರೀನಗರ, ಫೆ 09 (DaijiworldNews/DB): ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದಿದೆ.
ಬ್ಲಾಕ್ ಮೆಡಿಕಲ್ ಆಫೀಸರ್ ಮೊಹಮ್ಮದ್ ಶಾಫಿ
ಮೃತರನ್ನು ಮಜೀದ್ ಅಹ್ಮದ್, ಅವರ ಪತ್ನಿ ಶಾನಾ ಖಾತೂನ್, ಅವರ ಮಕ್ಕಳಾದ ಫೈಜಾನ್ ಅನ್ಸಾರಿ, ಅಬು ಝಾರ್ ಮತ್ತು ನವಜಾತ ಶಿಶು ಎಂದು ಗುರುತಿಸಲಾಗಿದೆ. ಕ್ರಾಲ್ಪೋರಾ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಈ ಕುಟುಂಬ ವಾಸವಾಗಿತ್ತು. ಮಾನಾಕ್ಸೈಡ್ ಎಂಬ ವಿಷಾನಿಲ ಸೇವನೆಯಿಂದ ಐವರೂ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ ಎಂದು ಕ್ರಾಲ್ಪೋರಾದ ಬ್ಲಾಕ್ ಮೆಡಿಕಲ್ ಆಫೀಸರ್ ಮೊಹಮ್ಮದ್ ಶಾಫಿ ತಿಳಿಸಿದ್ದಾರೆ.
ಬುಧವಾರ ಘಟನೆ ನಡೆದಿದ್ದು, ಇವರೆಲ್ಲರೂ ರಾತ್ರಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.