ಹುಬ್ಬಳ್ಳಿ, ಫೆ 09 (DaijiworldNews/DB): ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ರಾಜಕೀಯದಲ್ಲಿ ವೈಯಕ್ತಿಕ ವಿಷಯ, ಜಾತಿ ವಿಚಾರಗಳನ್ನು ಮಾತನಾಡುವುದು ಶೋಭೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲ. ಜಾತಿ, ವೈಯಕ್ತಿಕ ವಿಚಾರಗಳು ರಾಜಕಾರಣದಲ್ಲಿ ಬರಬಾರದು. ಎರಡು ಬಾರಿ ಸಿಎಂ ಆದ ಎಚ್ಡಿಕೆಯವರಿಗೆ ಇದು ಗೊತ್ತಿರಬೇಕು ಎಂದರು.
ರಾಜ್ಯ ಬಜೆಟ್ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಕರ್ನಾಟಕ ಸಹಿತ ರಾಜ್ಯದ ಅಭಿವೃದ್ದಿಗೆ ಪೂರಕವಾದ ಬಜೆಟ್ ಇರಲಿದೆ. ರಾಜ್ಯ ನಾಯಕರ ಜೊತೆಗೆ ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಕಾಗುವ ಯೋಜನೆಗಳ ಕುರಿತು ಸಮಾಲೋಚನೆ ನಡೆಯುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಜೋಶಿ ಅವರ ಕಚೇರಿ ದುರ್ಬಳಕೆ ಬಗ್ಗೆ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ. ಟೀಕಿಸುವವರಲ್ಲಿ ದಾಖಲೆಗಳಿದ್ದರೆ ಅದನ್ನು ನೀಡಲಿ. ಮಿಥ್ಯಾರೋಪಗಳ ಮೂಲಕ ರಾಜಕೀಯ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.