ಹೈದರಾಬಾದ್, ಫೆ 09 (DaijiworldNews/DB): ನಿರಂತರವಾಗಿ ಸ್ಮಾರ್ಟ್ಫೋನ್ ಬಳಕೆಯಿಂದಾಗಿ ತನ್ನ ದೃಷ್ಟಿಯನ್ನೇ ಕಳೆದುಕೊಂಡ ಯುವತಿಯೊಬ್ಬಳು ವೈದ್ಯರ ಸಲಹೆ ಬಳಿಕ ಸ್ಮಾರ್ಟ್ಫೋನ್ ಬಳಕೆ ಕಡಿಮೆ ಮಾಡಿ 18 ತಿಂಗಳ ಬಳಿಕ ದೃಷ್ಟಿದೋಷದಿಂದ ಮುಕ್ತಳಾಗಿದ್ದಾಳೆ!
ಈ ವಿಚಾರವನ್ನು ಸ್ವತಃ ಆಕೆಗೆ ಚಿಕಿತ್ಸೆ ನೀಡಿದ ವೈದ್ಯರೇ ಟ್ವಿಟರ್ನಲ್ಲಿ ಹೇಳಿಕೊಂಡಿದ್ದು, ಸ್ಮಾರ್ಟ್ಫೋನ್ನ ಅತಿಯಾದ ಬಳಕೆದಾರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ವೈದ್ಯರಾದ ಡಾ. ಸುಧೀರ್ಕುಮಾರ್ ಎಂಬವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಮಂಜು (30) ಎಂಬವರೇ ಅತಿಯಾದ ಸ್ಮಾರ್ಟ್ಫೀನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡವರು. ಮಗುವನ್ನು ನೋಡಿಕೊಳ್ಳಲೆಂದು ಬ್ಯೂಟೀಷಿಯನ್ ವೃತ್ತಿ ತೊರೆದಿದ್ದ ಮಂಜು ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಸ್ಮಾರ್ಟ್ಫೋನ್ ವೀಕ್ಷಿಸುತ್ತಿದ್ದರು. ಕತ್ತಲಾದ ಬಳಿಕವೂ ಮನೆಯ ಲೈಟ್ಗಳನ್ನು ಆಫ್ ಮಾಡಿ ಗಂಟೆಗಟ್ಟಲೆ ಮೊಬೈಲ್ ವೀಕ್ಷಣೆ ಮಾಡುತ್ತಿದ್ದರು. ಇದರಿಂದಾಗಿ ಬರುತ್ತಾ ಆಕೆಗೆ ದೃಷ್ಟಿ ಮಂದವಾಗತೊಡಗಿದ್ದಲ್ಲದೆ, ಕುರುಡುತನವೂ ಬಾಧಿಸಿತ್ತು.
ಸ್ಮಾರ್ಟ್ಫೋನ್ ವಿಷನ್ ಸಿಂಡ್ರೋಮ್ನಿಂದ ಆಕೆ ಬಳಲುತ್ತಿದ್ದಳು. ಕಂಪ್ಯೂಟರ್, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ನಂತಹ ಡಿವೈಸ್ಗಳ ದೀರ್ಘಾವಧಿಯ ಬಳಕೆಯು ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಅಥವಾ ಡಿಜಿಟಲ್ ವಿಷನ್ ಸಿಂಡ್ರೋಮ್ಗೆ ಕಾರಣವಾಗುತ್ತದೆ ಎಂದು ಡಾ. ಸುಧೀರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮಹಿಳೆಯ ದೃಷ್ಟಿದೋಷಕ್ಕೆ ಮೊಬೈಲ್ ಬಳಕೆಯೇ ಕಾರಣ ಎಂಬುದನ್ನು ವೈದ್ಯರು ಕಂಡು ಕೊಂಡಿದ್ದಾರೆ. ಹೀಗಾಗಿ ಯಾವುದೇ ಔಷಧಗಳನ್ನು ನೀಡದೇ ಸ್ಮಾರ್ಟ್ಫೋನ್ ಬಳಕೆಯನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದೀಗ ವೈದ್ಯರ ಸಲಹೆ ಪಾಲಿಸಿದ ಬಳಿಕ ನಿಧಾನಕ್ಕೆ ಕಣ್ಣಿನ ಸಮಸ್ಯೆ ನಿವಾರಣೆಯಾಗಿದೆ.
ಡಿಜಿಟಲ್ ಸಾಧನಗಳನ್ನು ನೋಡುವುದನ್ನು ಆದಷ್ಟು ಕಡಿಮೆ ಮಾಡಬೇಕು. ಇವುಗಳ ಮುಖಾಂತರವೇ ಕೆಲಸ ಮಾಡುವವರು ಪ್ರತಿ 20 ನಿಮಿಷಗಳಿಗೊಮ್ಮೆ ಕನಿಷ್ಠ 20 ಸೆಕೆಂಡುಗಳ ಕಾಲವಾದರೂ ಕಣ್ಣುಗಳಿಗೆ ವಿರಾಮ ನೀಡಬೇಕು ಎಂಬುದು ಡಾ. ಸುಧೀರ್ಕುಮಾರ್ ಅವರ ಸಲಹೆ.