ಕಾಕಿನಾಡ, ಫೆ 09( DaijiworldNews/MS): ತೈಲ ಕಾರ್ಖಾನೆಯಲ್ಲಿ ತೈಲ ಸಂಗ್ರಹದ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಏಳು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.
ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಜಿ.ರಾಗಂಪೇಟೆಯಲ್ಲಿರುವ ಅಂಬಟಿ ಸುಬ್ಬಣ್ಣ ತೈಲ ಕಾರ್ಖಾನೆಯ ಆವರಣದಲ್ಲಿ ಈ ಘಟನೆ ನಡೆದಿದ್ದು , ಕಾರ್ಮಿಕರು 24 ಅಡಿ ಆಳದ ತೈಲ ಟ್ಯಾಂಕರ್ ಅನ್ನು ಸ್ವಚ್ಛಗೊಳಿಸಲು ಒಬ್ಬೊಬ್ಬರಾಗಿ ಇಳಿದಿದ್ದರು. ಬಳಿಕ ಅಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತರರು ಕೇವಲ 10 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು. ಇವರಲ್ಲಿ ಐವರು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಾಡೇರು ನಿವಾಸಿಗಳಾಗಿದ್ದು, ಇಬ್ಬರು ಅದೇ ಮಂಡಲದ ಪುಲಿಮೇರು ಗ್ರಾಮದವರು ಎಂದು ತಿಳಿದು ಬಂದಿದೆ.
ಕಾರ್ಖಾನೆ ಆಡಳಿತ ಮಂಡಳಿ ಅಗತ್ಯ ಮುಂಜಾಗ್ರತೆ ವಹಿಸದಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರವೀಂದ್ರನಾಥ ಬಾಬು, ಜಿಲ್ಲಾಧಿಕಾರಿ ಕೃತಿಕಾ ಶುಕ್ಲಾ ಕೂಡ ಸ್ಥಳಕ್ಕೆ ತೆರಳಿದ್ದು, ತೈಲ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.