ಬೆಂಗಳೂರು, ಫೆ 09( DaijiworldNews/MS): ಯಡಿಯೂರಪ್ಪನವರು ನಮ್ಮ ಪಕ್ಷಕ್ಕೆ ಅರ್ಜಿ ಹಾಕೊಂಡು ನನ್ನ ಹತ್ತಿರ ಬಂದಿದ್ದರು. ನನಗೆ ಮಂತ್ರಿ ಮಾಡಿ ಬಿಜೆಪಿಗೆ ರಾಜೀನಾಮೆ ಕೊಡ್ತೀನಿ ಬಿಜೆಪಿಯಲ್ಲಿ ತಾನು ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ಆಪ್ತರೊಬ್ಬರ ಮೂಲಕ ಚೀಟಿ ಕಳುಹಿಸಿಕೊಟ್ಟಿದ್ದರು.ಆದರೆ, ಅವರ ರಾಜಕೀಯ ಇಮೇಜ್ ಉಳಿಸಲು ಅವರನ್ನು ಬಿಜೆಪಿಯಲ್ಲೇ ಮುಂದುವರೆಯಲು ಹೇಳಿದೆ. ಸರ್ಕಾರ ರಚನೆಗೂ ಅವಕಾಶ ಮಾಡಿಕೊಟ್ಟೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕುಮುಟಾದಲ್ಲಿ ಮಾತನಾಡಿದ ಅವರು, "ಬಿ.ಎಸ್.ಯಡಿಯೂರಪ್ಪ ಜತೆ ನಾನು ಕೈಜೋಡಿಸಿದ ಕಾರಣಕ್ಕೆ ಅವರು ಅಧಿಕಾರ ಪಡೆದರು. ಇಲ್ಲದಿದ್ದರೆ ಅಂದೇ ಯಡಿಯೂರಪ್ಪ ಅವರು ರಾಜಕೀಯವಾಗಿ ಜೀವನ ಮುಗಿದು ಹೋಗುತ್ತಿತ್ತು. ವಿಜಯೇಂದ್ರ ರಾಜಕೀಯವಾಗಿ ಬೆಳೆಯಲೂ ಅವಕಾಶ ಆಗುತ್ತಿರಲಿಲ್ಲ" ಎಂದು ಬಿವೈಸ್ ಜೊತೆ ಕುಮಾರಸ್ವಾಮಿ ಕೈ ಜೋಡಿಸದಿದ್ರೆ ಅಂತ್ಯ ಆಗುತ್ತಿದ್ರು ಎಂಬ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು.
'ರಾಜ್ಯಕ್ಕೆ ಕೊಡುಗೆ ನೀಡಿದ ಶಿವಮೊಗ್ಗ ಮೂಲದ ಹಲವು ಗಣ್ಯರಿದ್ದಾರೆ. ಅವರ್ಯಾರು ಬಿಜೆಪಿ ನಾಯಕರಿಗೆ ಕಣ್ಣಿಗೆ ಬಿದ್ದಿಲ್ಲವೆ?' ಎಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡುವ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿದರು.