ಪಣಜಿ, ಫೆ 09 (DaijiworldNews/DB): ರೈಲು ಬೋಗಿಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕೇಂದ್ರ ರೈಲ್ವೇ ಸಚಿವ ಅಶ್ಚಿನಿ ವೈಷ್ಣವ್ ಅವರಿಗೆ ಪತ್ರ ಬರೆಯುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಮಂಗಳೂರಿನಿಂದ ಗೋವಾಗೆ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಅವರು ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈಲಿನಲ್ಲಿ ಮಂಗಳೂರಿನಿಂದ ಗೋವಾಗೆ ಸಂಚರಿಸಿದ ವೇಳೆ ಕೆಲವೊಂದು ಸಮಸ್ಯೆಗಳನ್ನು ಗಮನಿಸಿದೆ. ಮುಖ್ಯವಾಗಿ ಬೋಗಿಗಳಲ್ಲಿ ವೈ-ಫೈ ಸೌಲಭ್ಯ ಬೇಕು. ಈ ಸಂಬಂಧ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗುವುದು ಎಂದರು.
ಗೋವಾ-ಮಂಗಳೂರು ನಡುವೆ ರೈಲು ಸಂಪರ್ಕ ಹೆಚ್ಚಿಸಬೇಕು. ಮುಂಬೈ-ಮಂಗಳೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ನ್ನು ಗೋವಾಕ್ಕೆ ವಿಸ್ತರಿಸಬೇಕು. ಅಲ್ಲದೆ ಮಂಗಳೂರು ಹಾಗೂ ಗೋವಾದ ಮೋಪಾದಲ್ಲಿರುವ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವಿಮಾನ ಹಾರಾಟವೂ ಅಗತ್ಯವಾಗಿ ಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.
ಈ ಎರಡು ನಗರಗಳ ನಡುವೆ ವಾಯುಯಾನ ಮತ್ತು ರೈಲು ಸಂಪರ್ಕ ಇನ್ನಷ್ಟು ಹೆಚ್ಚಾದರೆ ಪ್ರವಾಸೋದ್ಯಮ ಉತ್ತೇಜನಕ್ಕೆ ಸಹಕಾರಿ. ವ್ಯಾಪಾರವರ್ಧನೆಯೂ ಇದರಿಂದ ಸಾಧ್ಯವಾಗುತ್ತದೆ ಎಂದವರು ಪ್ರತಿಪಾದಿಸಿದರು.