ಇಸ್ತಾನ್ಬುಲ್, ಫೆ 09 (DaijiworldNews/SM): ಪ್ರಬಲ ಭೂಕಂಪನಕ್ಕೆ ಟರ್ಕಿ ಮತ್ತು ಸಿರಿಯಾ ಸಂಪೂರ್ಣ ನಲುಗಿದೆ. ತೀವ್ರತರನಾದ ಭೂಕಂಪನದಿಂದ ಮೃತರ ಸಂಖ್ಯೆ ಕೂಡ ಏರಿಕೆಯಾಗ್ತಾ ಇದೆ. ಇದೀಗ ಕುಸಿದು ಬಿದ್ದಿರುವ ಕಟ್ಟಡ, ಅವಶೇಷಗಳಡಿಯಲ್ಲಿ ಮತ್ತಷ್ಟು ಮಂದಿ ಸಿಲುಕಿಕೊಂಡಿರುವುದು ಪತ್ತೆಯಾಗುತ್ತಿದೆ.
ಸಂಭವಿಸಿದ ಭೀಕರ ಭೂಕಂಪದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಕುಸಿದ ಮನೆಗಳ ಅವಶೇಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಸಾವಿನ ಸಂಖ್ಯೆ 19,300ಕ್ಕೆ ಏರಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಗಳು ಸಂಭವಿಸಿದ ಮೂರು ದಿನಗಳ ನಂತರ ಲಕ್ಷಾಂತರ ಜನರು ನಿರಾಶ್ರಿತರಾಗಿ ಶಿಬಿರಗಳಲ್ಲಿ ಆಶ್ರಯಪಡೆಯುತ್ತಿದ್ದಾರೆ. ಇನ್ನು ಕೊರೆಯುವ ಚಳಿಯಲ್ಲಿ ಆಹಾರ ಮತ್ತು ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನು ಕಟ್ಟಡದ ಅವಶೇಷಗಳ ಅಡಿಯಿಂದ ನೂರಾರು ಮಂದಿ ಬದುಕಿ ಬರುತ್ತಿರುವುದು ನಿಜಕ್ಕೂ ವಿಸ್ಮಯ ಮೂಡಿಸಿದ್ದರು.
ಅಂತಕ್ಯಾ ನಗರದಲ್ಲಿ ರಾತ್ರಿಯಿಡೀ ರಕ್ಷಣಾ ಕಾರ್ಯ ನಡೆಸುತ್ತಿರುವ ತುರ್ತು ರಕ್ಷಣಾ ಸಿಬ್ಬಂದಿ ಹಜಾಲ್ ಗುನರ್ ಎಂಬ ಹುಡುಗಿಯನ್ನು ಕಟ್ಟಡದ ಅವಶೇಷಗಳಿಂದ ರಕ್ಷಿಸಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ 19,300 ದಾಟಿದ್ದು 80,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 110,000ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ಈಗ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.