ಭೋಪಾಲ್, ಫೆ 10 (DaijiworldNews/DB): ಬಿಜೆಪಿ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲೇ ಕುರ್ತಾ ತೆಗೆದು ಬಾಟಲಿ ನೀರಿನಿಂದ ಮೈ ತೊಳೆದುಕೊಂಡ ಪ್ರಸಂಗ ಮಧ್ಯಪ್ರದೇಶದ ದೇವರಾಚಿ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳ್ಯಾರೋ ಯಾವುದೋ ಪೌಡರ್ ಎಸೆದಿದ್ದರಿಂದ ಉಂಟಾದ ಅಸಹನೀಯ ತುರಿಕೆಯೇ ಇದಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದ ಆರೋಗ್ಯ ಇಂಜಿನಿಯರಿಂಗ್ ಇಲಾಖೆ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರೇ ಈ ರೀತಿ ಕುರ್ತಾವನ್ನು ಸಾರ್ವಜನಿಕ ಸ್ಥಳದಲ್ಲಿ ತೆಗೆದವರು. ಅಶೋಕ ನಗರ ಜಿಲ್ಲೆಯಲ್ಲಿರುವ ತಮ್ಮ ವಿಧಾನಸಭಾ ಕ್ಷೇತ್ರ ಮುಂಗೋಲಿ ವ್ಯಾಪ್ತಿಯಲ್ಲಿರುವ ದೇವರಾಚಿ ಗ್ರಾಮದಲ್ಲಿ ಅವರು ಸಾರ್ವಜನಿಕರೊಂದಿಗೆ ಸಭೆ ನಡೆಸುತ್ತಿದ್ದರು. ಈ ವೇಳೆ ಕಿಡಿಗೇಡಿಗಳ್ಯಾರೋ ಸಚಿವರ ಮೇಲೆ ಯಾವುದೋ ಪೌಡರ್ ಎಸೆದಿದ್ದು, ಆ ಪೌಡರ್ ಬೀಳುತ್ತಿದ್ದಂತೆ ಸಚಿವರ ಮೈಮೇಲೆ ಅಸಹನೀಯ ತುರಿಕೆ ಉಂಟಾಗಿದೆ. ತುರಿಕೆ ತಡೆಯಲಾಗದೆ ಸಚಿವರು ಅಲ್ಲೇ ತಮ್ಮ ಕುರ್ತಾ ಬಿಚ್ಚಿ ಎಸೆದಿದ್ದು, ಬಾಟಲಿ ನೀರಿನಿಂದಲೇ ಮೈ ತೊಳೆದುಕೊಂಡಿದ್ದಾರೆ.
ಫೆಬ್ರವರಿ 25ರವರೆಗೆ ರಾಜ್ಯಾದ್ಯಂತ ಬಿಜೆಪಿ ವಿಕಾಸ ಯಾತ್ರೆ ನಡೆಯಲಿದೆ. ಸರ್ಕಾರದ ಅಭಿವೃದ್ದಿ ಕೆಲಸಗಳ ಬಗ್ಗೆ ಜನರಿಗೆ ತಿಳಿ ಹೇಳುವುದಲ್ಲದೆ, ಯೋಜನೆಗಳು, ಫಲಾನುಭವಿಗಳಿಗೆ ಅರಿವು ಮೂಡಿಸುವ ಕೆಲಸವೂ ಈ ವೇಲೆ ನಡೆಯಲಿದೆ ಎಂದು ಪಕ್ಷ ಹೇಳಿದೆ.