ಬೆಂಗಳೂರು, ಫೆ 10 (DaijiworldNews/DB): ಮಾತನಾಡುವಾಗ ವಿಶೇಷಚೇತನರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ನಟ ಮುಖ್ಯಮಂತ್ರಿ ಚಂದ್ರು ವಿರುದ್ದ ಸರ್ವೋದಯ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘವು ದೂರು ನೀಡಿದೆ.
ಮುಖ್ಯಮಂತ್ರಿ ಚಂದ್ರು ಅವರು ಮಾತನಾಡುವ ವೇಳೆ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯು ಕುಂಟನೇ, ಕುರುಡನೇ, ಹೆಳವನೇ ಎಂದು ಹೇಳಿಕೆ ನೀಡಿದ್ದಾರೆ. ಇದು ವಿಶೇಷಚೇತನರನ್ನು ನಿಂದಿಸುವ ಮಾತಾಗಿದೆ ಎಂದು ಆರೋಪಿಸಿ ಸಂಘವು ಅವರ ವಿರುದ್ದ ದೂರು ನೀಡಿದೆ. ಅಲ್ಲದೆ ಚಂದ್ರು ಅವರು ಮಾಧ್ಯಮದ ಮುಂದೆ ಕ್ಷಮೆ ಯಾಚಿಸಬೇಕು. ಸರ್ಕಾರ ಅವರನ್ನು ಬಂಧಿಸಬೇಕು ಎಂದು ಮದ್ದೂರು ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ. ಅಲ್ಲದೆ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಕೂಡಾ ಮನವಿ ಮಾಡಲಾಗಿದೆ.
'ಮುಖ್ಯಮಂತ್ರಿ' ಹೆಸರಿನ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿದ್ದಾಗಿನಿಂದ ಮುಖ್ಯಮಂತ್ರಿ ಚಂದ್ರು ಎಂದೇ ಖ್ಯಾತಿಯಾಗಿರುವ ಅವರು ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಅಗ್ನಿಸಾಕ್ಷಿ ಮೂಲಕ ಧಾರವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ.