ಜೈಪುರ, ಫೆ 10 (DaijiworldNews/DB): ವಿಧಾನಸಭೆಯಲ್ಲಿ ಕಳೆದ ವರ್ಷದ ಬಜೆಟ್ ಓದುವ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಡವಟ್ಟು ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮುಖ್ಯ ಸಚೇತಕರು ಎಚ್ಚರಿಸಿದ ಬಳಿಕವಷ್ಟೇ ಅವರಿಗೆ ತಮ್ಮ ಪ್ರಮಾದದ ಅರಿವಾಗಿದೆ.
ವಿಧಾನಸಭೆಯಲ್ಲಿಂದು 2023-24ನೇ ಸಾಲಿನ ಬಜೆಟ್ ಮಂಡನೆ ಇದ್ದ ಹಿನ್ನೆಲೆಯಲ್ಲಿ ಬಜೆಟ್ಗಾಗಿ ಸದಸ್ಯರು ಕುತೂಹಲದಿಂದ ಕಾಯುತ್ತಿದ್ದರು. ಅದರಂತೆ ಸಿಎಂ ಗೆಹ್ಲೋಟ್ ಬಜೆಟ್ ಮಂಡನೆ ಆರಂಭಿಸಿದರು. ಆದರೆ ಅವರು ಓದಿದ್ದು ಕಳೆದ ವರ್ಷದ ಬಜೆಟ್ನ್ನು. ಸುಮಾರು ಏಳು ನಿಮಿಷಗಳ ಕಾಲ ಅವರು ಕಳೆದ ವರ್ಷದ ಬಜೆಟ್ ಮಂಡಿಸುತ್ತಾ ಹೋದರೂ, ಈ ಬಗ್ಗೆ ಅವರಿಗೆ ಅರಿವಿಗೇ ಬಂದಿರಲಿಲ್ಲ. ಆದರೆ ಕೂಡಲೇ ವಿಷಯ ಅರಿತ ಮುಖ್ಯ ಸಚೇತಕರು ಮುಖ್ಯಮಂತ್ರಿಯವರನ್ನು ಎಚ್ಚರಿಸಿದ್ದಾರೆ. ಆ ಬಳಿಕ ಅವರಿಗೆ ತಮ್ಮ ಪ್ರಮಾದದ ಅರಿವಾಗಿ ಬಜೆಟ್ ಓದುವುದನ್ನು ನಿಲ್ಲಿಸಿದ್ದಾರೆ.
ಇನ್ನು ಗೆಹ್ಲೋಟ್ ಕಳೆದ ವರ್ಷದ ಬಜೆಟ್ ಓದುತ್ತಿದ್ದಂತೇ ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ್ದು, ಸದನದ ಬಾವಿಗಿಳಿದು ಪ್ರತಿಭಟಿಸಿದರು. ಬಜೆಟ್ ಕಾಪಿ ಯಾವ ವರ್ಷದ್ದು ಎಂಬುದೇ ಮುಖ್ಯಮಂತ್ರಿಯವರಿಗೆ ಗೊತ್ತಿಲ್ಲ. ಮಂಡನೆಗೂ ಮೊದಲು ಕಾಪಿಯನ್ನು ಅವರು ಓದಿಕೊಂಡೂ ಬಂದಿಲ್ಲ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸುಮಾರು ಅರ್ಧ ಗಂಟೆ ಕಾಲ ಬಜೆಟ್ ಅಧಿವೇಶನ ಮುಂದೂಡಲ್ಪಟ್ಟಿತು.