ನವದೆಹಲಿ, ಫೆ 10 (DaijiworldNews/DB): ಇಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳನ್ನಾಗಿ ಶುಕ್ರವಾರ ನೇಮಕ ಮಾಡಲಾಗಿದೆ. ಆ ಮೂಲಕ ಸುಪ್ರೀಂ ಕೋರ್ಟ್ನ ಎಲ್ಲಾ 34 ನ್ಯಾಯಮೂರ್ತಿಗಳ ಸ್ಥಾನ ಭರ್ತಿಯಾಗಿದೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಈ ಕುರಿತು ಟ್ವೀಟ್ ಮಾಡಿದ್ದು, ಭಾರತ ಸಂವಿಧಾನದ ನಿಬಂಧನಗೆಳ ಪ್ರಕಾರ ಇಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳನ್ನಾಗಿ ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ.
ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಹಾಗೂ ಹುಜರಾತ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಇದೀಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ ಎಂದಿದ್ದಾರೆ.
ಕಳೆದ ತಿಂಗಳು ಸುಪ್ರೀಂಕೋರ್ಟ್ ಕೊಲಿಜಿಯಂ ಈ ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಿತ್ತು. ಕಳೆದ ವಾರವಷ್ಟೇ ಐವರು ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್ಗೆ ನೇಮಿಸಲಾಗಿತ್ತು. ಇದೀಗ ಮತ್ತಿಬ್ಬರ ನೇಮಕದೊಂದಿಗೆ ಎಲ್ಲ 34 ನ್ಯಾಯಮೂರ್ತಿಗಳ ಸ್ಥಾನ ಭರ್ತಿಯಾಗಿದೆ.
ರಾಜೇಶ್ ಬಿಂದಾಲ್ ಅವರು 2006ರ ಮಾರ್ಚ್ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ಬಳಿಕ 2021ರ ಅಕ್ಟೋಬರ್ನಲ್ಲಿ ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.
ಅರವಿಂದ್ ಕುಮಾರ್ ಅವರು 2009ರ ಜೂನ್ನಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿದ್ದರು. ಬಳಿಕ 2012ರ ಡಿಸೆಂಬರ್ನಲ್ಲಿ ಖಾಯಂಗೊಳಿಸಲಾಗಿತ್ತು. 2021ರ ಅಕ್ಟೋಬರ್ನಲ್ಲಿ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು.