ಹರಿಯಾಣ, ಫೆ 10 (DaijiworldNews/DB): ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಹರಿಯಾಣ ಸರ್ಕಾರ ಹೊಸ ಡ್ರೆಸ್ ಕೋಡ್ ವಿಧಿಸಿದೆ. ಹೊಸ ನಿಯಮ ಪ್ರಕಾರ ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್ಲೆಸ್ ಟಾಪ್, ಸ್ಕರ್ಟ್ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರನ್ನು ರೋಗಿಗಳು ಸುಲಭವಾಗಿ ಗುರುತಿಸುವಂತಾಗಲು ಮತ್ತು ಏಕರೂಪತೆ ತರಲು ಈ ನೀತಿ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆಸ್ಪತ್ರೆಯ ಸಿಬ್ಬಂದಿ ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್ಲೆಸ್ ಟಾಪ್ಸ್ ಹಾಗೂ ಸ್ಕರ್ಟ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ವೈದ್ಯರು ಮೇಕಪ್, ಭಾರವಾದ ಆಭರಣಗಳನ್ನೂ ಧರಿಸುವಂತಿಲ್ಲ. ಉದ್ದನೆಯ ಉಗುರು ಬೆಳೆಸುವಂತಿಲ್ಲ. ಪುರುಷ ವೈದ್ಯರು ಕಾಲರ್ಗಿಂತ ಉದ್ದವಿರುದ ಕೂದಲು ಬೆಳೆಸುವಂತಿಲ್ಲ ಎಂದು ಸೂಚಿಸಲಾಗಿದೆ.
ಇನ್ನು ಡ್ರೆಸ್ಕೋಡ್ನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಮಾಹಿತಿ ನೀಡಿದ್ದಾರೆ.