ಹೈದರಾಬಾದ್, ಫೆ 10 (DaijiworldNews/DB): ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ನಿಜಾಮರ ಸಂಸ್ಕೃತಿ ಬಿಂಬಿಸುವ ಗುಮ್ಮಟಗಳನ್ನು ಕೆಡವಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.
ಕುಕಟ್ಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೇ ಬೋಯಿನಪಲ್ಲಿಯಲ್ಲಿ "ಜನಂ ಗೋಸಾ-ಬಿಜೆಪಿ ಭರೋಸಾ" ಕಾರ್ಯಕ್ರಮದ ಅಂಗವಾಗಿ ಪಕ್ಷದ ಬೀದಿ ಮೂಲೆ ಸಭೆಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ರಾಜ್ಯ ಸಚಿವಾಲಯದಿಂದ ಹೊಸದಾಗಿ ನಿರ್ಮಿಸಲಾಗಿರುವ ನಿಜಾಮರ ಸಂಸ್ಕೃತಿ ಬಿಂಬಿಸುವ ಗುಮ್ಮಟಗಳನ್ನು ಕೆಡವುದು ಬಿಜೆಪಿಯ ಆದ್ಯತೆ. ಅದು ಗುಲಾಮಗಿರಿಯ ಸಂಕೇತವಾಗಿದೆ. ಅಲ್ಲದೆ ಅಂತಹ ಎಲ್ಲಾ ರೀತಿಯ ರಚನೆಗಳನ್ನೂ ಅಳಿಸಿ ಹಾಕಲಾಗುವುದು ಎಂದರು.
ನಿಜಾಮರ ಸಾಂಸ್ಕೃತಿಕ ಚಿಹ್ನೆಗಳನ್ನು ನಾಶ ಮಾಡುತ್ತೇವೆ. ತೆಲಂಗಾಣದ ಸಂಸ್ಕೃತಿ, ಭಾರತದ ಪರಂಪರೆ ಬಿಂಬಿಸುವಂತಹ ಬದಲಾವಣೆಗಳನ್ನು ರಾಜ್ಯದಲ್ಲಿ ಮಾಡುತ್ತೇವೆ. ಅಲ್ಲದೆ ಪ್ರಗತಿ ಭವನವಾಗಿರುವ ಮುಖ್ಯಮಂತ್ರಿಗಳ ಅಧಿಕೃತ ಬಂಗಲೆಯನ್ನು ಪ್ರಜಾ ದರ್ಬಾರ್ ಆಗಿ ರೂಪುಗೊಳಿಸಲಾಗುವುದು ಎಂದವರು ತಿಳಿಸಿದರು.
ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಪ್ರಾರ್ಥನಾ ಮಂದಿರಗಳನ್ನು ಕೆಡವಲಾಗುವುದು ಎಂಬ ಮುಖ್ಯಮಂತ್ರಿ ಕೆಸಿಆರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಾಧ್ಯವಾದರೆ ಹಳೆಪೇಟೆಯ ರಸ್ತೆ ನಡುವಿನಲ್ಲಿರುವ ಮಸೀದಿಗಳನ್ನು ಕೆಸಿಆರ್ ಕೆಡವಿ ಹಾಕಲಿ ಎಂದು ಸವಾಲೆಸೆದರು.