ನವದೆಹಲಿ, ಫೆ 10 (DaijiworldNews/DB): ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ ತೆರಳಿರುವ ಭಾರತೀಯ ಸೇನೆಯ ಮಹಿಳಾ ಅಧಿಕಾರಿಯನ್ನು ಟರ್ಕಿಶ್ ಮಹಿಳೆಯೊಬ್ಬರು ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ರಕರ್ತ ಝುಹಕ್ ತನ್ವಿರ್ ಎಂಬುವವರು ಈ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಬಳಿಕ ಭಾರತೀಯ ಸೇನೆಯು ಟ್ವಿಟರ್ನಲ್ಲಿ ಈ ಫೋಟೋ ಹಂಚಿಕೊಂಡಿದ್ದು, ’ವಿ ಕೇರ್’ ಎಂದು ಶೀರ್ಷಿಕೆ ನೀಡಿದೆ. ಭಾರತೀಯ ಸೇನೆ ಮತ್ತು ಭಾರತೀಯ ರಕ್ಷಣಾ ಮಿಷನ್ ಜಂಟಿಯಾಗಿ ಟರ್ಕಿಯ ಹಟೇಯಲ್ಲಿ ಫೀಲ್ಡ್ ಆಸ್ಪತ್ರೆಯನ್ನು ಸ್ಥಾಪಿಸಿದ್ದು, ಈ ಫೋಟೋವನ್ನು ಇಲ್ಲೇ ತೆಗೆದಿರಬಹುದು ಎಂದು ಅಂದಾಜಿಸಲಾಗಿದೆ.
ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪನದಿಂದಾಗಿ ಟರ್ಕಿಯಲ್ಲಿ ಈವರೆಗೆ 17,674 ಹಾಗೂ ಸಿರಿಯಾದಲ್ಲಿ ಇದುವರೆಗೆ 3,377 ಸೇರಿ ಸುಮಾರು 21,051 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.