ನವದೆಹಲಿ, ಫೆ 10 (DaijiworldNews/DB): ಪ್ರೇಮಿಗಳ ದಿನದ ಬದಲಿಗೆ ಫೆಬ್ರವರಿ 14ರಂದು ಗೋವು ಅಪ್ಪುಗೆ ದಿನ ಆಚರಿಸಿ ಎಂಬುದಾಗಿ ಸುತ್ತೋಲೆ ಹೊರಡಿಸಿದ್ದ ಕೇಂದ್ರ ಸರ್ಕಾರ ಇದೀಗ ಆ ಸುತ್ತೋಲೆಯನ್ನು ಹಿಂಪಡೆದಿದೆ. ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಪ್ರೇಮಿಗಳ ದಿನದ ಬದಲು ಹಸುವನ್ನು ಅಪ್ಪಿಕೊಳ್ಳಿ. ಇದರಿಂದ ಭಾವನಾತ್ಮಕ ಶ್ರೀಮಂತಿಕೆ ಮತ್ತು ಸಾಮೂಹಿಕ ಸಂತೋಷ ಹೆಚ್ಚುತ್ತದೆ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಬುಧವಾರ ಸುತ್ತೋಲೆ ಹೊರಡಿಸಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದ್ದು, ಕೃಷಿ ಬದುಕಿನಲ್ಲಿಯೂ ಗೋವಿನ ಪಾತ್ರ ಮಹತ್ವದ್ದಾಗಿದೆ ಎಂದು ಮಂಡಳಿ ಪ್ರತಿಪಾದಿಸಿತ್ತು.
ಆದರೆ ಮಂಡಳಿಯ ಈ ಸುತ್ತೋಲೆಯು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿತ್ತು. ಇದೀಗ ಸುತ್ತೋಲೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಡಳಿ ಹೊರಡಿಸಿದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ.
ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ ಫೆಬ್ರವರಿ 14 ರಂದು ಹಸು ಅಪ್ಪುಗೆ ದಿನವನ್ನು ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಎಸ್ಕೆ ದತ್ತಾ ತಿಳಿಸಿದ್ದಾರೆ.