ಬೆಂಗಳೂರು, ಫೆ 11 (DaijiworldNews/DB): ಶಿಕ್ಷಕರ ಸಂಬಳ ದ್ವಿಗುಣಗೊಳಿಸಬೇಕು, ವಾರಕ್ಕೆ ಐದೇ ದಿನ ಶಾಲೆ ಕಾರ್ಯ ನಿರ್ವಹಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಏಳನೇ ವೇತನ ಆಯೋಗದ ಮುಂದೆ ಮಂಡಿಸಿದೆ.
ಏಳನೇ ವೇತನ ಆಯೋಗ ನಿಗದಿಗೊಳಿಸಿದ್ದ ಪ್ರಶ್ನಾವಳಿಗಳಿಗೆ ಸಂಬಂಧಿಸಿದಂತೆ 135 ಪುಟಗಳ ಪ್ರತಿಕ್ರಿಯೆಯನ್ನು ಶುಕ್ರವಾರ ಸಲ್ಲಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಪ್ರಮುಖವಾದ 25 ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿದೆ.
ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರು ಪಡೆಯುತ್ತಿರುವ 25,800 - 51,400 ರೂ. ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ 51,600 - 1,02,800 ರೂ.ಗಳ ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿ ಮಾಡಬೇಕು. ಅಲ್ಲದೆ ಹತ್ತು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನೀಡುವ ಕಾಲಮಿತಿ ಬಡ್ತಿ ವೇತನ ಶ್ರೇಣಿಯನ್ನೂ ದ್ವಿಗುಣಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಇನ್ನು ಹದಿನೈದು ವರ್ಷ ಸೇವೆ ಸಲ್ಲಿಸಿದವರಿಗೆ ನೀಡುವ ಸ್ವಯಂ ಚಾಲಿತ ಬಡ್ತಿ ವೇತನ ಶ್ರೇಣಿಯನ್ನು ಕೂಡಾ ಎರಡು ಪಟ್ಟು ಹೆಚ್ಚಳ ಮಾಡಬೇಕು. ಪದವೀಧರ ಶಿಕ್ಷಕರ ವೇತನವನ್ನೂ ದ್ವಿಗುಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಿಕ್ಷಕರಿಗೆ ಮುಂಬಡ್ತಿ ನೀಡುವ ವ್ಯವಸ್ಥೆ ಪ್ರತೀ ಐದು ವರ್ಷಗಳಿಗೊಮ್ಮೆ ನಡೆಯಬೇಕು. ಮನೆ ಬಾಡಿಗೆ ಭತ್ಯೆ ಹೆಚ್ಚಳ ಮಾಡಬೇಕು. ಪ್ರತಿ ಶಾಳೆಗೊಬ್ಬ ಡಿ ಗ್ರೂಪ್ ಸಿಬಂದಿಯನ್ನು ನೇಮಕ ಮಾಡಬೇಕು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿಯನ್ನು ಪ್ರಾರಂಭ ಮಾಡಬೇಕು. ವಾರದಲ್ಲಿ ಐದು ದಿನ ಮಾತ್ರ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂದೂ ಒತ್ತಾಯಿಸಲಾಗಿದೆ.