ನವದೆಹಲಿ, ಫೆ 11 (DaijiworldNews/DB): ಪುತ್ರಿಯನ್ನೇ ಅಪಹರಿಸಿರುವ ಆರೋಪ ಎದುರಿಸುತ್ತಿರುವ ದೆಹಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಾಸು ರುಖಾರ್ ಅವರನ್ನು ಪಕ್ಷದಿಂದ ಶುಕ್ರವಾರ ಉಚ್ಚಾಟನೆ ಮಾಡಲಾಗಿದೆ.
ದೆಹಲಿಯ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್ದೇವ ಅವರು ವಾಸು ರುಖಾರ್ಗೆ ಈ ಸಂಬಂಧ ಪತ್ರ ಬರೆದಿದ್ದು, ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ. ಅಲ್ಲದೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನಡತೆ ಮತ್ತು ಚಟುವಟಿಕೆಗಳು ಪಕ್ಷಕ್ಕೆ ವಿರುದ್ದವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಪತ್ರದಲ್ಲಿ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷರು ಸಹಿ ಮಾಡಿದ್ದಾರೆ.
ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ವಾಸು ಪುತ್ರಿಯನ್ನು ಕೇಂದ್ರ ದೆಹಲಿಯ ಝುಂಡೇವಾಲನ್ನಿಂದ ಅಪಹರಿಸಿ ಮೌರೀಸ್ ನಗರದ ದೇವಾಲಯವೊಂದರ ಬಳಿ ಅನಾಥವಾಗಿ ಬಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ವಾಸು ಅವರಿಗೆ ಈಗಾಗಲೇ ಮೂವರು ಪುತ್ರಿಯರಿದ್ದಾರೆ. ಇದರಿಂದಾಗಿ ಒಂದೂವರೆ ವರ್ಷದ ಪುತ್ರಿಯನ್ನು ಅನಾಥವಾಗಿ ಬಿಡುವಂತೆ ಅವರು ಪತ್ನಿ ಮೇಲೆ ಒತ್ತಡ ಹಾಕುತ್ತಿದ್ದರು ಎಂಬ ಆರೋಪವೂ ಅವರ ಮೇಲಿದೆ. ಆದರೆ ಉಚ್ಚಾಟನೆ ಕುರಿತು ವಾಸು ರುಖಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.