ನವದೆಹಲಿ, ಫೆ 11 (DaijiworldNews/DB): ಮೂತ್ರಪಿಂಡ ಶಸ್ತ್ರಚಿಕಿತ್ಸೆ ಬಳಿಕ ಭಾರತಕ್ಕೆ ಹಿಂತಿರುಗುತ್ತಿರುವ ಲಾಲೂ ಪ್ರಸಾದ್ ಯಾದವ್ ಅವರ ಬಗ್ಗೆ ಅವರಿಗೆ ಕಿಡ್ನಿ ದಾನ ಮಾಡಿರುವ ಪುತ್ರಿ ರೋಹಿಣಿ ಆಚಾರ್ಯ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ತಂದೆಯನ್ನು ನೀವೆಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತೀರಾ ಎಂದು ಭಾವಿಸಿದ್ದೇನೆ ಎಂದು ಬರೆದಿದ್ದಾರೆ.
ರೋಹಿಣಿ ಆಚಾರ್ಯ ಅವರು ಶುಕ್ರವಾರ ಟ್ವೀಟ್ ಮಾಡಿದ್ದು, ಸದ್ಯ ನನ್ನ ತಂದೆ ಮೂತ್ರಪಿಂಡ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಮಗಳಾಗಿ ನಾನು ನನ್ನ ಕರ್ತವ್ಯ ನೆರವೇರಿಸಿದ್ದೇನೆ. ಇದೀಗ ಅವರು ಸಿಂಗಾಪುರದಿಂದ ಭಾರತಕ್ಕೆ ಬರುತ್ತಿದ್ದುಅವರನ್ನು ನೀವೆಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಬರೆದುಕೊಂಡಿದ್ದಾರೆ.
74 ವರ್ಷದ ಲಾಲೂ ಪ್ರಸಾದ್ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ಪುತ್ರಿ ರೋಹಿಣಿ ಆಚಾರ್ಯ ಕಿಡ್ನಿ ದಾನ ಮಾಡಿದ್ದರು. ಅದರಂತೆ ಕಳೆದ ಡಿಸೆಂಬರ್ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆಂದು ಸಿಂಗಾಪುರಕ್ಕೆ ತೆರಳಿದ್ದ ಲಾಲು ಪ್ರಸಾದ್ ಯಾದವ್ ಅವರು ಇದೀಗ ಶಸ್ತ್ರಚಿಕಿತ್ಸೆ ನಂತರ ಸಂಪೂರ್ಣ ಚೇತರಿಸಿಕೊಂಡು ಭಾರತಕ್ಕೆ ಬರುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಬಿಹಾರ ಡಿಸಿಎಂ, ಲಾಲೂ ಪುತ್ರ ತೇಜಸ್ವಿ ಯಾದವ್ ಅವರು ಟ್ವೀಟ್ ಮಾಡಿ ಕಿಡ್ನಿ ದಾನಿ ಅಕ್ಕ ರೋಹಿಣಿ ಆಚಾರ್ಯ ಮತ್ತು ತಂದೆ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು.