ನವದೆಹಲಿ, ಫೆ 11 (DaijiworldNews/DB): ಲಿಕ್ಕರ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವೈಎಸ್ಆರ್ಸಿಪಿ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ ಅವರ ಪುತ್ರ ಮಾಗುಂಟ ರಾಘವ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ದೆಹಲಿಯಲ್ಲಿ ಮದ್ಯ ದಂಧೆ ವಿಚಾರವಾಗಿ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರು ಮಾಗುಂಟ ಶ್ರೀನಿವಾಸ ರೆಡ್ಡಿ ಅವರ ಭೇಟಿಯಾಗಿರುವುದನ್ನು ಇಡಿ ಉಲ್ಲೇಖ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕೆ. ಕವಿತಾ ಅವರ ಆಡಿಟರ್, ತೆಲಂಗಾಣ ಮೂಲದ ಸಿಎ ಬುಚ್ಚಿಬಾಬು ಗೋರಂಟ್ಲಾ ಅವರನ್ನು ದೆಹಲಿ ಮದ್ಯ ನೀತಿ ಪ್ರಕರಣ ಸಂಬಂಧ ಸಿಬಿಐ ಬಂಧಿಸಿತ್ತು. ಈ ಬಂಧನವಾದ ಕೆಲವೇ ದಿನಗಳ ಬಳಿಕ ಮಾಗುಂಟ ರಾಘವ ಅವರನ್ನು ಇಡಿ ಬಂಧಿಸಿದೆ.
ಇನ್ನು ಕೆಸಿಆರ್ ಪುತ್ರಿ ಕವಿತಾ ಅವರನ್ನು ಕಳೆದ ಡಿಸೆಂಬರ್ 12ರಂದು ಹೈದರಾಬಾದ್ನಲ್ಲಿ ಸಿಬಿಐ ಅಧಿಕಾರಿಗಳು ಸತತ ಏಳು ಗಂಟೆಗಳ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಈಗಾಗಲೇ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಒಂಬತ್ತು ಮಂದಿಯನ್ನು ಬಂಧಿಸಿದ್ದು, ಎರಡು ಆರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.